ವಿಮಾನದೊಳಗೆ ಹಾವು !

ಮೆಕ್ಸಿಕೋ, ನ.8: ಮೆಕ್ಸಿಕೋದ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಇತ್ತೀಚೆಗೆ ವಿಮಾನದ ಕ್ಯಾಬಿನ್ ನಲ್ಲಿ ನುಸುಳಿದ ಹಾವೊಂದನ್ನು ಕಂಡು ಆಘಾತವಾಗಿತ್ತಲ್ಲದೆ ಈ ಚಿತ್ರ ಥೇಟ್ ಹಾಲಿವುಡ್ ಥ್ರಿಲ್ಲರ್ ‘ಸ್ನೇಕ್ಸ್ ಆನ್ ಎ ಪ್ಲೇನ್’ ಚಿತ್ರದ ದೃಶ್ಯದಂತಿತ್ತು.
ರವಿವಾರ ಟೊರಿಯನ್‌ನಿಂದ ಮೆಕ್ಸಿಕೋ ನಗರದತ್ತ ಪ್ರಯಾಣಿಸುತ್ತಿದ್ದ ಏರೋ ಮೆಕ್ಸಿಕೋ ವಿಮಾನದಲ್ಲಿ ಈ ಹಸಿರು ಹಾವು ಸೀಲಿಂಗ್ ನಲ್ಲಿ ಮೊದಲು ಕಾಣಿಸಿಕೊಂಡಿದ್ದು, ಕೆಲವೇ ಹೊತ್ತಿನಲ್ಲಿ ಪ್ರಯಾಣಿಕರೊಬ್ಬರ ಲಗೇಜ್ ಎಡೆಯಿಂದ ತೂರಿ ಬಂದಿತ್ತು. ವಿಮಾನದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ತಮ್ಮ ಸೆಲ್ ಫೋನಿನಲ್ಲಿ ಸೆರೆ ಹಿಡಿದಿದ್ದು, ಹಾವು ಸುಮಾರು ಮೂರು ಅಡಿ ಉದ್ದವಿತ್ತು.
ಕ್ಯಾಬಿನ್ನಿನ ಸೀಲಿಂಗಿನಿಂದ ನೇತಾಡುತ್ತಿದ್ದ ಹಾವಿನಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಪ್ರಯಾಣಿಕರು ತಮ್ಮ ಸೀಟು ಬೆಲ್ಟುಗಳನ್ನು ಬಿಚ್ಚಿ ಬೇರೆಡೆ ಸಾಗಿದರು. ಕೊನೆಗೆ ವಿಮಾನ ಪರಿಚಾರಿಕೆಯರು ಒದಗಿಸಿದ್ದ ರಗ್ ಗಳನ್ನುಉಪಯೋಗಿಸಿ ಹಾವನ್ನು ಕೆಲ ಪ್ರಯಾಣಿಕರು ಸೆರೆ ಹಿಡಿದರು. ವಿಮಾನದಲ್ಲಿ ಹಾವಿರುವ ಸಂಗತಿಯನ್ನು ಪೈಲಟ್ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದ್ದು, ಮುಂದಿನ ಹತ್ತು ನಿಮಿಷಗಳಲ್ಲಿ ವಿಮಾನ ಮೆಕ್ಸಿಕೋ ವಿಮಾನ ನಿಲ್ದಾಣದಲ್ಲಿ ಇಳಿದಾಗ ಪ್ರಯಾಣಿಕರು ಹಿಂದಿನ ಬಾಗಿಲಿನಿಂದ ಹೊರ ಸಾಗಿದರು. ನಂತರ ಹಾವು ಹಿಡಿಯುವ ಪರಿಣತರು ವಿಮಾನಕ್ಕಾಗಮಿಸಿ ಅದನ್ನು ಬೇರೆಡೆ ಸಾಗಿಸಿದರು.
ಹಾವು ವಿಮಾನದೊಳಗೆ ಹೇಗೆ ನುಸುಳಿಕೊಂಡಿತೆಂಬುದರ ಬಗ್ಗೆ ಏರ್ ಮೆಕ್ಸಿಕೋ ತನಿಖೆ ನಡೆಸಲಿದೆ.
Frightening moment on an Aeromexico flight when a large snake fell from overhead mid-flight. https://t.co/e6bXLFv9A4 pic.twitter.com/OHgCdeQSUW
— ABC News (@ABC) November 7, 2016







