ಏಕರೂಪ ನಾಗರಿಕ ಸಂಹಿತೆಯಿಂದ ಮಹಿಳಾ ಸಮಾನತೆ, ಲಿಂಗಸಮಾನತೆ ಅಸಾಧ್ಯ: ಯೆಚೂರಿ

ತಿರುವನಂತಪುರಂ,ನ. 8: ಸಮಾನ ನಾಗರಿಕ ಸಂಹಿತೆಯಿಂದ ಮಹಿಳೆಯರಿಗೆ ಸಮಾನತೆಯನ್ನಾಗಲಿ ಲಿಂಗ ಸಮಾನತೆಯನ್ನಾಗಲಿ ದೃಢಪಡಿಸಲು ಸಾಧ್ಯವಿಲ್ಲವೆಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತರಾಂ ಯೆಚೂರಿ ಹೇಳಿದ್ದಾರೆಂದು ವರದಿಯಾಗಿದೆ. ಉತ್ತರಪ್ರದೇಶ ಚುನಾವಣೆಯು ಪ್ರಧಾನಿ ನರೇಂದ್ರಮೋದಿ ಪಾಲಿಗೆ ಮೂರನೆ ತಲಾಕ್ ಆಗಲಿದೆ. ಸಿಪಿಐಎಂ ನೇತೃತ್ವದಲ್ಲಿ ವರ್ಷವಿಡೀ ಆಚರಿಸಲಾಗುತ್ತಿರುವ ಅಕ್ಟೋಬರ್ ಕ್ರಾಂತಿ ಶತಾಬ್ದಿಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಮನಬಂದಂತೆ ಮತ್ತು ದಿಢೀರ್ ಆಗಿ ಸಮಾನನಾಗರಿಕ ಸಂಹಿತೆ ಜಾರಿಗೆ ತರುವುದು ತಪ್ಪಾಗಿದೆ. ಅದರಿಂದ ಮಹಿಳೆಯರ ಹಕ್ಕು ದೊರಕುವುದಿಲ್ಲ ಎಂದು ಸಿಪಿಐಎಂನ ಅಭಿಪ್ರಾಯವಾಗಿದೆ. ಎಲ್ಲ ಧರ್ಮಗಳು ಏಕತಾನತೆಯನ್ನು ಹೊಂದಿರುವುದು ಆಗಿದ್ದರೆ ಅದು ಸಾಧ್ಯ. ಇಲ್ಲಿ ವೈಯಕ್ತಿಕ ಕಾನೂನುಗಳಿದ್ದರೂ ಕೆಲವು ಮಂದಿರಗಳಿಗೆ ಮಹಿಳೆಯರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ವಿಧವೆಯರ ಮರುವಿವಾಹದ ಅವಸ್ಥೆಯೂ ಇದೇ ರೀತಿಯಲ್ಲಿದೆ. ವಿಧವೆಯರ ಸಂಕಟಗಳನ್ನು ಅರ್ಥಮಾಡಿಕೊಳ್ಳಲು ಪ್ರಧಾನಮಂತ್ರಿಯ ಸ್ವಕ್ಷೇತ್ರಕ್ಕೆ ಹೋದರೆ ಸಾಕು. ಒಂದುವೇಳೆ ಸಮಾನನಾಗರಿಕ ಸಂಹಿತೆಯನ್ನು ಜಾರಿಗೊಳಿಸಲೇ ಬೇಕೆಂದಿದ್ದರೆ ಎಲ್ಲ ಧರ್ಮದವರನ್ನು ಒಂದೆಡೆ ಕೂರಿಸಿ ಎಲ್ಲರಿಗೂ ಹೊಂದಿಕೆಯಾಗುವ ರೀತಿಯಲ್ಲಿ ರೂಪಿಸಬೇಕಿದೆ. ತ್ರಿವಳಿ ತಲಾಕ್ ಎತ್ತುವ ಮೋದಿಗೆ ದಿಲ್ಲಿ ಚುನಾವಣೆಯಲ್ಲಿ ಮೊದಲ ತಲಾಕ್ ದೊರೆಯಿತು. ಬಿಹಾರದ ಚುನಾವಣೆಯಲ್ಲಿ ಎರಡನೆ ತಲಾಕ್ ದೊರಕಿದೆ. ಮೂರನೇ ತಲಾಕ್ ಉತ್ತರಪ್ರದೇಶದ ಚುನಾವಣೆಯಲ್ಲಿ ಅವರಿಗೆ ಸಿಗಲಿದೆ ಎಂದು ಯಚೂರಿ ಹೇಳಿದ್ದಾರೆಂದು ವರದಿ ತಿಳಿಸಿದೆ.





