ಜಪಾನ್ ಮುಳುಗುತ್ತಿದೆಯೇ ?
ಪ್ರಮುಖ ನಗರದಲ್ಲಿ ದೈತ್ಯ ಕಂದಕ ಸೃಷ್ಟಿ ; ಜನರಲ್ಲಿ ಆತಂಕ

ಟೋಕಿಯೋ, ನ.8: ಜಪಾನ್ ದೇಶದ ಫುಕುವೊಕಾ ನರದ ನಿವಾಸಿಗಳಿಗೆ ಮಂಗಳವಾರ ಬೆಳಗ್ಗೆ ಆಘಾತಕರ ಸುದ್ದಿಯೊಂದು ಕಾದಿತ್ತು. ನಗರದ ಪ್ರಮುಖ ವಾಣಿಜ್ಯ ರಸ್ತೆಯೊಂದರಲ್ಲಿ ದೈತ್ಯ ಕಂದಕವೊಂದು ಸೃಷ್ಟಿಯಾಗಿದೆ ಎಂಬ ಸುದ್ದಿ ಈ ನಗರವಾಸಿಗಳಲ್ಲಿ ಆತಂಕವನ್ನೇ ಸೃಷ್ಟಿಸಿದೆ.
ಸಬ್-ವೇ ಸುರಂಗ ಮಾರ್ಗವೊಂದರ ನಿರ್ಮಾಣ ಕಾರ್ಯನಡೆಯುತ್ತಿರುವಾಗ ನಗರದ ಪ್ರಮುಖ ರೈಲ್ವೇ ನಿಲ್ದಾಣದ ಪಕ್ಕದ ಐದು ಪಥದ ರಸ್ತೆಯೊಂದರ ಬಹುಭಾಗವನ್ನು ಈ ದೈತ್ಯ ಕಂದಕ ನುಂಗಿ ಬಿಟ್ಟಿದೆ. ಈ ದೈತ್ಯ ಕಂದಕ ಸುಮಾರು 20 ಮೀಟರ್ ಉದ್ದವಿದ್ದು 15 ಮೀಟರ್ ಅಗಲವಿದೆಯೆನ್ನಲಾಗಿದೆ. ಇದರಿಂದಾಗಿ ಆಸುಪಾಸಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ವರದಿಗಳ ಪ್ರಕಾರ ಈ ಕಂದಕ ಹತ್ತಿರದ ಕಟ್ಟಡಗಳ ಅಡಿಪಾಯಕ್ಕೆ ಹಾನಿಗೈದಿದೆ. ಸ್ಥಳೀಯಾಡಳಿತ ಹತ್ತಿರದ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಲಾಗಿದೆ. ರಸ್ತೆಯನ್ನು ದಾಟುವುದು ಕೂಡ ಅಸಾಧ್ಯವಾಗಿದ್ದು, ನಗರದಲ್ಲಿ ಟ್ರಾಫಿಕ್ ಜ್ಯಾಮ್ ಸೃಷ್ಟಿಯಾಗಿದೆ. ಅಲ್ಲಿ ಪ್ರಸ್ತುತ ನಡೆಯುತ್ತಿರುವ ಭೂಗತ ನಿರ್ಮಾಣ ಕಾರ್ಯ ಈ ದೈತ್ಯ ಕಂದಕ ಸೃಷ್ಟಿಗೆ ಕಾರಣವಾಗಿರಬಹುದೆಂದು ಸ್ಥಳೀಯಾಡಳಿತ ಶಂಕೆ ವ್ಯಕ್ತಪಡಿಸಿದೆ. ಈ ದೈತ್ಯ ಕಂದಕದಿಂದಾಗಿ ಯಾರಿಗೂ ಗಾಯಗಳುಂಟಾದ ವರದಿಯಾಗಿಲ್ಲ.
ಇಂತಹ ಒಂದು ಘಟನೆ ಜಪಾನ್ ನಲ್ಲಿ ನಡೆದಿರುವುದು ಇದೇ ಪ್ರಥಮವಾಗಿದೆ. ಕೆಲ ವರ್ಷಗಳ ಹಿಂದೆ ಜಪಾನಿನಲ್ಲಿ ಭೂಕಂಪವಾದಾಗ ಅಲ್ಲಿನ ನಗರವೊಂದರಲ್ಲಿ ಇಂತಹುದೇ ಕಂದಕವೊಂದು ಸೃಷ್ಟಿಯಾಗಿತ್ತು.
ಜಪಾನ್ ಒಂದಲ್ಲ ಒಂದು ದಿನ ಸಾಗರದೊಳಗಡೆ ಮುಳುಗಡೆಯಾಗಬಹುದೆಂಬ ಭಯ ಇಲ್ಲಿನ ಭೂವಿಜ್ಞಾನಿಗಳು ಹಾಗೂ ಸಾರ್ವಜನಿಕರನ್ನು ಕಾಡುತ್ತಿದೆ. ಈ ಬಗ್ಗೆ ಹಲವಾರು ಪುಸ್ತಕಗಳನ್ನೂ ಬರೆಯಲಾಗಿದೆ.
2006 ರಲ್ಲಿ ಬಿಡುಗಡೆಯಾದ ಚಿತ್ರ ‘ಜಪಾನ್ ಈಸ್ ಸಿಂಕಿಂಗ್’ ನಲ್ಲಿ ತಜ್ಞರು ಜಪಾನ್ ಮುಂದಿನ 40 ವರ್ಷಗಳೊಳಗಾಗಿ ಮುಳುಗುವುದೆಂದು ಹೇಳಿಕೊಂಡಿದ್ದರು.





