ಉದ್ಯೋಗಕ್ಕೆಂದು ಹೋಗಿ ರಿಯಾದ್ ನಲ್ಲಿ ಗುಲಾಮನಾದ ಭಾರತದ ಇಂಜಿನಿಯರ್

ಕೊಲ್ಕತ್ತಾ,ನ.8 :ಈ ವರ್ಷದ ಮೇ ತಿಂಗಳಿನಲ್ಲಿ ರಿಯಾದ್ ನಗರಕ್ಕೆ ಅಲ್ಲಿನ ಅಟೋಮೊಬೈಲ್ ಸರ್ವಿಸ್ ಸೆಂಟರಿನಲ್ಲಿ ಉದ್ಯೋಗ ದೊರಕಿತೆಂಬ ಖುಷಿಯಲ್ಲಿ ಆಗಮಿಸಿದ್ದಅಟೋಮೊಬೈಲ್ ಇಂಜಿನಿಯರ್ ಆಗಿದ್ದ ನೈಹಾತಿ ನಿವಾಸಿ 23 ವರ್ಷದ ಜಯಂತ ಬಿಸ್ವಾಸ್ ಅವರಿಗೆ ಅಲ್ಲಿ ಬರೀ ನಿರಾಸೆ ಕಾದಿತ್ತು. ಅವರನ್ನು ಏಜಂಟರು ಸೌದಿ ನಾಗರಿಕನೊಬ್ಬನ ಗುಲಾಮನಾಗಿರಲು ಮಾರಾಟ ಮಾಡಿದ್ದಾರೆಂದು ನಂತರ ತಿಳಿದು ಬಂದಿತ್ತು.
ಸೌದಿ ಮಾಲಿಕನ ಅಡಿಯಲ್ಲಿ ಜಯಂತ ಪಡಬಾರದ ಬವಣೆ ಪಡುತ್ತಿದ್ದಾರೆಂದು ಅರಿತ ಅವರ ಕುಟುಂಬ ಸದಸ್ಯರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸಿ ಸಹಾಯಕ್ಕಾಗಿ ವಿನಂತಿಸಿದ್ದರೂ ಇಲ್ಲಿಯ ತನಕ ಅವರು ಯಾವತ್ತು ಮತ್ತೆ ತಾಯ್ನೆಡಿಗೆ ಮರಳಿ ಬರುತ್ತಾರೆಂದು ತಿಳಿಯದಾಗಿದೆ. ಜಯಂತ ಅವರ ಮಾಲಿಕ ಅವರ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆಸಲು ಯತ್ನಿಸಿದ್ದಾರೆಂಬ ಆರೋಪವಿದೆ.
ಜುಲೈ 16 ರ ರಾತ್ರಿ ಜಯಂತ ತನ್ನ ಮಾಲಿಕನ ಮನೆಯಿಂದ ಪರಾರಿಯಾಗಲು ಯತ್ನಿಸಿದರೂ ವಿಫಲನಾಗಿದ್ದರು. ಮರುದಿನ ಮುಂಜಾನೆ ಅವರ ಮಾಲಿಕ ಅವರ ನರಗಳಿಗೆ ಯಾವುದೋ ಡ್ರಗ್ಸ್ ಚುಚ್ಚಲು ಯತ್ನಿಸುತ್ತಿದ್ದ. ಅಲ್ಲಿಂದ ತಪ್ಪಿಸಿಕೊಳ್ಳುವ ಬೇರೆ ದಾರಿ ಕಾಣದೆ ಒಂದು ಮುಂಜಾನೆ ಅವರು ಅಲ್ಲಿನ ಭಾರತೀಯ ದೂತಾವಾಸ ಕಚೇರಿಗೆ ಆಗಮಿಸಿ ಅಲ್ಲಿನ ಅಧಿಕಾರಿಗಳ ಬಳಿ ತಮ್ಮ ಬವಣೆ ತೋಡಿಕೊಂಡರು. ದೂತಾವಾಸ ಅಧಿಕಾರಿಗಳು ಅವರನ್ನು ಸೌದಿ ರಾಜಧಾನಿಯ ಎನ್ ಜಿ ಒ ಬಳಿ ಕಳುಹಿಸಿದರೂ ಪ್ರಯೋಜನವಾಗಿಲ್ಲ. ಅವರು ತನ್ನ ಬಳಿಯಿದ್ದ10,000 ಸೌದಿ ರಿಯಾಲ್ ಕದ್ದಿದ್ದಾರೆಂದು ಆರೋಪಿಸಿದ ಅವರ ಮಾಲಿಕಪೊಲೀಸ್ ದೂರು ನೀಡಿದ್ದು ಅವರನ್ನು ಆಗಸ್ಟ್ 9 ರಂದು ಬಂಧಿಸಲಾಯಿತು.ತರುವಾಯ ಸೌದಿಯಲ್ಲಿನ ತನ್ನ ಕೆಲ ಬಂಧುಗಳನ್ನು ಸಂಪರ್ಕಿಸಲು ಸಫಲರಾದ ಜಯಂತ ಅವರ ಮೂಲಕ ತಮ್ಮ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ ಪರಿಣಾಮ ಅವರು ಜಯಂತ ಅವರನ್ನು ಟೂರಿಸ್ಟ್ ವೀಸಾದಲ್ಲಿ ರಿಯಾದ್ ಗೆ ಕಳುಹಿಸಿದ್ದ ಏಜಂಟರಾದ ದೆಹಲಿಯ ಅಲ್ ಹಮ್ದ್ ಮ್ಯಾನ್ ಪವರ್ ಕನ್ಸಲ್ಟೆಂಟ್ ಸರ್ವಿಸಸ್ ನ ಮುನೀರ್ ಅಹಮದ್ ಹಾಗೂ ಮುಂಬೈ ಮೂಲದ ಹಫೀರ್ ಮ್ಯಾನ್ ಪವರ್ ಕನ್ಸಲ್ಟೆಂಟ್ಸ್ ನ ಎಚ್ ಎಂ ಸಾದಿಖ್ ಅವರನ್ನು ಸಂಪರ್ಕಿಸಿದ್ದರು. ರಿಯಾದ್ ನಲ್ಲಿ ಮೂರು ತಿಂಗಳು ನೆಲೆಸಿದ ಬಳಿಕ ವರ್ಕ್ ವೀಸಾ ದೊರೆತು ಆಟೋಮೊಬೈಲ್ ಸರ್ವಿಸ್ ಸೆಂಟರಿನಲ್ಲಿ ಉದ್ಯೋಗ ದೊರೆಯುವುದಾಗಿ ಅವರು ತಿಳಿಸಿದ್ದರೆಂದೂ ತಿಳಿದು ಬಂದಿತ್ತು. ಆದರೆ ಜಯಂತ ಅವರು ಜೈಲಿನಲ್ಲಿದ್ದಾರೆಂದು ತಿಳಿದ ಏಜಂಟರು ಅವರನ್ನು ಅಲ್ಲಿಂದ ಬಿಡಿಸಲು ರೂ 35000 ಬೇಡಿಕೆ ಸಲ್ಲಿಸಿದ್ದರು. ಆ ಮೊತ್ತ ದೊರೆತ ಕೂಡಲೇ ಅವರು ಅಕ್ಟೋಬರ್ 27 ರಂದು ಜಯಂತ ಅವರನ್ನು ಬಿಡುಗಡೆಗೊಳಿಸುವಲ್ಲಿ ಸಫಲರಾದರು ಎಂದು ತಿಳಿದು ಬಂದಿದೆ.
ಆದರೆ ಜಯಂತ ಅಲ್ಲಿಂದ ಯಾವಾಗ ತಾಯ್ನಡಿಗೆ ಮರಳಲಿದ್ದಾರೆಂದು ಅವರ ಕುಟುಂಬಕ್ಕೆ ತಿಳಿಯದಾಗಿದ್ದು ಅವರ ತಂದೆ ರಬೀಂದ್ರನಾಥ್ ಬಿಸ್ವಾಸ್ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರಬರೆದಿದ್ದಾರೆ. ರಿಯಾದ್ ನಲ್ಲಿರುವ ಭಾರತೀಯ ದೂತಾವಾಸದಿಂದ ಸೂಕ್ತ ಸಹಕಾರ ದೊರೆಯುತ್ತಿಲ್ಲ ಎಂಬ ದೂರು ಜಯಂತ್ ಅವರ ಕುಟುಂಬದ್ದಾಗಿದೆ.







