ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರ ಕೈ ಹಿಡಿಯಲು ನಿರಾಕರಿಸಿದ ಕೇಂದ್ರ ಸಚಿವ ಮಿಶ್ರಾ
ಉತ್ತರ ಪ್ರದೇಶ ಬಿಜೆಪಿ ರ‍್ಯಾಲಿಯಲ್ಲಿ

ಹೊಸದಿಲ್ಲಿ, ನ. 8 : ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ಕಲ್ರಾಜ್ ಮಿಶ್ರ ಅವರು ಪಕ್ಷದ ಉತ್ತರ ಪ್ರದೇಶ ಘಟಕಾಧ್ಯಕ್ಷ , ಸಂಸದ ಹಾಗು ಹಿಂದುಳಿದ ವರ್ಗದ ನಾಯಕ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಬೃಹತ್ ಸಾರ್ವಜನಿಕ ಸಮಾವೇಶದ ವೇದಿಕೆಯಲ್ಲೇ ಹೀನಾಯವಾಗಿ ಅವಮಾನಿಸಿದ ಘಟನೆ ಇತ್ತೀಚಿಗೆ ನಡೆದಿದೆ.
ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಉತ್ತರ ಪ್ರದೇಶದಲ್ಲಿ ಹಿಂದುಳಿದ ವರ್ಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆ ವರ್ಗದಿಂದ ಬಂದ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿ ಚುನಾವಣಾ ಪ್ರಚಾರ ಆರಂಭಿಸಿರುವ ಬಿಜೆಪಿಗೆ ಇದರಿಂದ ತೀವ್ರ ಇರುಸು ಮುರುಸು ಉಂಟಾಗಿದೆ.
ಇತ್ತೀಚಿಗೆ ಝಾನ್ಸಿಯಲ್ಲಿ ಬಿಜೆಪಿಯ ಬೃಹತ್ ಸಮಾವೇಶ ಏರ್ಪಡಿಸಲಾಗಿತ್ತು. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಹಿತ ಹಿರಿಯ ನಾಯಕರು ಇದರಲ್ಲಿ ಭಾಗವಹಿಸಿದ್ದರು. ಸಮಾವೇಶದ ಕೊನೆಯಲ್ಲಿ ಒಗ್ಗಟ್ಟಿನ ಸಂದೇಶ ರವಾನಿಸಲು ಎಲ್ಲ ನಾಯಕರು ಒಟ್ಟಿಗೆ ನಿಂತು ಕೊಂಡರು. ಬಳಿಕ ಕೈ ಕೈ ಹಿಡಿದು ಮೇಲೆತ್ತಿದರು. ಈ ಸಂದರ್ಭದಲ್ಲಿ ಉತ್ಸಾಹದಲ್ಲಿ ಪಕ್ಷದ ರಾಜ್ಯಾಧ್ಯಕ್ಷ , ಸಂಸದ ಕೇಶವ್ ಪ್ರಸಾದ್ ಅವರು ತಮ್ಮ ಪಕ್ಕದಲ್ಲಿದ್ದ ಹಿರಿಯ ನಾಯಕ, ಕೇಂದ್ರ ಸಚಿವ ಕಲ್ರಾಜ್ ಮಿಶ್ರ ಅವರ ಕೈ ಹಿಡಿದು ಮೇಲೆತ್ತಿ ಬಿಟ್ಟರು. ಆದರೆ ಇದರಿಂದ ತೀವ್ರ ಸಿಟ್ಟಾದ ಮಿಶ್ರ ಅವರು ಸಮಾವೇಶದ ವೇದಿಕೆ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳದೆ ಕೇಶವ್ ಅವರ ಕೈಯನ್ನು ಒರಟಾಗಿ ದೂಡಿ ಬಿಟ್ಟರು. ಮಾತ್ರವಲ್ಲ ಕೇಶವ್ ಗೆ ಮಿಶ್ರ ಅವರು ಬೈದು ಬುದ್ಧಿ ಹೇಳುವುದು ಸ್ಪಷ್ಟವಾಗಿ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಇದರಿಂದ ತೀವ್ರ ಅವಮಾನಿತರಾದ ಕೇಶವ್ ಪ್ರಸಾದ್ ಅವರು ಏನೂ ಅಗಲಿಲ್ಲವೆಂಬಂತೆ ವೇದಿಕೆಯ ಹಿಂಬದಿಗೆ ಹೋಗಿಬಿಟ್ಟರು. ಉಳಿದ ನಾಯಕರು ಈ ಬಗ್ಗೆ ಗಮನ ಹರಿಸಲಿಲ್ಲ.
ಇದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಿಶ್ರಾ ಅವರು ಬ್ರಾಹ್ಮಣ ನಾಯಕರಾಗಿದ್ದು ಹಿಂದುಳಿದ ವರ್ಗದ ಕೇಶವ್ ಅವರು ಕೈ ಹಿಡಿದಿದ್ದು ಅವರಿಗೆ ಪಥ್ಯವಾಗಲಿಲ್ಲ. ಅದರಿಂದಾಗಿ ಸಿಟ್ಟಿಗೆದ್ದು ತಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನೇ ಅವಮಾನಿಸಿದರು ಎಂದು ಮಾಧ್ಯಮಗಳಲ್ಲಿ, ಸಾಮಾಜಿಕ್ ಜಾಲತಾಣಗಳಲ್ಲಿ ಇದನ್ನು ವ್ಯಾಖ್ಯಾನಿಸಲಾಗಿದೆ. ಈ ಬಗ್ಗೆ ತೀವ್ರ ಅಸಮಾಧಾನವೂ ವ್ಯಕ್ತವಾಗಿದೆ.
ವಿಷಯ ಗಂಭೀರವಾಗುತ್ತಿದ್ದಂತೆ ಮಿಶ್ರ ಅವರಿಗೆ ಭುಜದ ತೀವ್ರ ನೋವಿದ್ದು ಕೈ ಎತ್ತಿ ಹಿಡಿಯಲು ಅಸಾಧ್ಯವಾಗಿತ್ತು ಎಂದು ಬಿಜೆಪಿ ನಾಯಕರು ಸಮಜಾಯಿಷಿ ನೀಡಿದ್ದಾರೆ. ಆದರೆ ಇದನ್ನು ಪ್ರಶ್ನಿಸಿರುವ ಹಿರಿಯ ಪತ್ರಕರ್ತ ಮಹೇಂದ್ರ ನಾರಾಯಣ್ ಸಿಂಗ್ ಯಾದವ್ ಅವರು ಈ ಹಿಂದೆ ಮಿಶ್ರಾ ಅವರು ಬೇರೆ ನಾಯಕರ ಜೊತೆ ತಮ್ಮ ಎರಡೂ ಕೈಗಳನ್ನು ಎತ್ತಿ ಹಿಡಿದ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ' ಸಮಸ್ಯೆ ಇರುವುದು ಭುಜದಲ್ಲಿ ಅಲ್ಲ, ಹಿಂದುಳಿದ ವರ್ಗದ ನಾಯಕರ ಕೈ ಹಿಡಿಯುವಲ್ಲಿ' ಎಂದು ಹೇಳಿದ್ದಾರೆ.

.jpg)







