ಮನುಷ್ಯರು ವಿಕೃತ ಕ್ರೂರಿಗಳಾದರೆ, ಇವು ಮಾನವೀಯತೆ ಮೆರೆದವು
7 ದಿನದ ಮಗುವನ್ನು ಕಾಪಾಡಿದ ನಾಯಿಗಳು

ಆ ನಾಲ್ಕು ನಾಯಿಗಳು ಇಲ್ಲದೆ ಹೋಗಿದ್ದಲ್ಲಿ ಏಳು ದಿನದ ಹಸುಗೂಸು ಬದುಕಿ ಉಳಿಯುತ್ತಿರಲಿಲ್ಲ. ಹೆಚ್ಚೇನೂ ಮಾಡಲಾಗದೆ ಆ ನಾಯಿಗಳು ಮಗುವಿನ ಸುತ್ತಲೂ ಕೂತು ಕಾಗೆಗಳನ್ನು ಓಡಿಸಿದವು. ಅಲ್ಲದೆ ಇತರರು ಬಂದು ಮಗುವನ್ನು ರಕ್ಷಿಸುವವರೆಗೂ ಅದರ ಸುತ್ತಲೂ ನಡೆದಾಡುತ್ತಾ ನಿಂತವು. ನಾಯಿಗಳು ಮನುಷ್ಯನ ಆತ್ಮೀಯ ಸ್ನೇಹಿತರು ಎನ್ನುವ ಸತ್ಯವನ್ನು ಮತ್ತೊಮ್ಮೆ ಈ ನಾಲ್ಕು ನಾಯಿಗಳು ಸಾಬೀತು ಮಾಡಿರುವುದಕ್ಕೆ ಸ್ಥಳೀಯರು ಬಹಳ ಖುಷಿಯಾಗಿದ್ದಾರೆ.
ಶಾಲಾ ಅದ್ಯಾಪಕ ಉಲ್ಹಾಸ್ ಚೌಧುರಿಗೆ ಶನಿವಾರ ಬೆಳಗ್ಗೆ ಪಠಾಡ್ರಿ ಪಾರಾದ ತಮ್ಮ ಮನೆಯ ಪಕ್ಕದಲ್ಲೇ ಇರುವ ಪೊದೆಗಳು ಮತ್ತು ಮರಗಳಿಂದ ಕೂಡಿದ ಪ್ರಾಂತದಲ್ಲಿ ಹಾದು ಹೋಗುತ್ತಿದ್ದಾಗ ಮಗುವಿನ ಅಳು ಕೇಳಿಸಿ ಅಚ್ಚರಿಯಾಗಿತ್ತು. ತಮ್ಮ ಶಾಲೆ ಮನ್ಭೂಮ್ ವಿಕ್ಟೋರಿಯ ಸಂಸ್ಥೆಗೆ ಶಾರ್ಟ್ ಕಟ್ ಆಗಿರುವ ಕಾರಣ ಅವರು ಆ ಹಾದಿಯಲ್ಲಿ ಹೋಗುತ್ತಾರೆ. ಅಳು ಕೇಳಿಸಿ ಅವರು ಪೊದೆಗಳನ್ನು ನೋಡಿದರು. ನಾಲ್ಕು ನಾಯಿಗಳು ಯಾವುದೋ ಒಂದರ ಸುತ್ತ ತಿರುಗುತ್ತಿರುವುದು ಅವರಿಗೆ ಕಾಣಿಸಿತು. ಚೌಧುರಿ ಸ್ಥಳಕ್ಕೆ ಭೇಟಿ ನೀಡಿದಾಗ ನಾಲ್ಕು ನಾಯಿಗಳು ಹೆಣ್ಣು ಮಗುವೊಂದರ ಸುತ್ತ ಕಾವಲು ಕಾದಿರುವುದು ಕಂಡಿತ್ತು. ಹಸುಗೂಸನ್ನು ಗುಲಾಬಿ ಬಣ್ಣದ ಬಟ್ಟೆಯಲ್ಲಿ ಸುತ್ತಲಾಗಿತ್ತು. ಆತನನ್ನು ನೋಡುತ್ತಲೇ ನಾಯಿಗಳು ಬಾಲ ಅಲ್ಲಾಡಿಸುತ್ತಾ, ಬೊಗಳುತ್ತಾ ಮಗುವಿನ ಪಕ್ಕ ಕೂತವು. ತಕ್ಷಣವೇ ಚೌಧುರಿ ಸಮೀಪದಲ್ಲಿರುವವರಿಗೆ ವಿಷಯ ತಿಳಿಸಿದರು.
ಸ್ಥಳೀಯರು ಸ್ಥಳಕ್ಕೆ ಧಾವಿಸಿದರು. ಚೌಧುರಿ ನೆರೆಮನೆಯ ವ್ಯಕ್ತಿ ಪರ್ವೀನ್ ಸೇನ್ ಮಗುವನ್ನು ಎತ್ತಿಕೊಂಡು ಅದಕ್ಕೆ ಹಾಲು ಕುಡಿಸಿದರು. "ಹಾಲು ಕುಡಿದ ಮೇಲೆ ಮಗು ಅಳು ನಿಲ್ಲಿಸಿತ್ತು" ಎನ್ನುತ್ತಾರೆ ಚೌಧುರಿ. ಅಚ್ಚರಿ ಎನ್ನುವಂತೆ ಮಗುವನ್ನು ಆರಂಭದಲ್ಲಿ ಚೌಧುರಿ ನಿವಾಸಕ್ಕೆ ತಂದಾಗ ನಾಲ್ಕು ನಾಯಿಗಳೂ ಜನರನ್ನು ಹಿಂಬಾಲಿಸುತ್ತಾ ಮನೆಯವರೆಗೆ ಬಂದಿದ್ದವು. ನಂತರ ಪುರುಲಿಯ ಸಾದರ್ ಪೊಲೀಸ್ ಠಾಣೆಗೆ ಸುದ್ದಿ ನೀಡಲಾಯಿತು. ಪೊಲೀಸರು ಮಕ್ಕಳ ಸಹಾಯವಾಣಿಗೆ ಸುದ್ದಿ ನೀಡಿದರು. ಮಗುವನ್ನು ಪೊಲೀಸರು ದೇಬನ್ ಮಹಾತೋ ಸರ್ದಾರ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗು ಏಳೆಂಟು ದಿನದ್ದಾಗಿದ್ದು, 2.8 ಕಿಲೋಗಳಷ್ಟು ತೂಕವಿದೆ. ಮಗುವನ್ನು ವಿಶೇಷ ಚಿಕಿತ್ಸಾ ಘಟಕದಲ್ಲಿಡಲಾಗಿದೆ. "ಜಾಂಡೀಸ್ ಚಿಹ್ನೆಗಳಿರುವುದು ಬಿಟ್ಟರೆ, ಮಗು ಆರೋಗ್ಯವಾಗಿದ್ದಾಳೆ" ಎಂದು ಡಾ ಶಿಬ್‌ಶಂಕರ್ ಮಹಾತೋ ಹೇಳಿದ್ದಾರೆ.
ಶನಿವಾರ ರಕ್ಷಿಸಿದ ಕಾರಣ ಚೌಧುರಿ ಮಗುವಿಗೆ ಸಾನಿಯ ಎಂದು ಹೆಸರಿಟ್ಟಿದ್ದಾರೆ. ಜಿಲ್ಲಾ ಮಕ್ಕಳ ಸಹಾಯವಾಣಿ ಸಂಯೋಜಕ ದೀಪಂಕರ್ ಸರ್ಕಾರ್ ಪ್ರಕಾರ ಮಗುವನ್ನು ಭತ್ಬಂಧ್‌ನಲ್ಲಿರುವ ರಾಜ್ಯದ ಅನಾಥಾಲಯಕ್ಕೆ ಕರೆದೊಯ್ಯಲಾಗುವುದು. "ನಾಯಿಗಳು ಇಲ್ಲದೆ ಹೋದಲ್ಲಿ ಮಗು ಸಿಗುತ್ತಿರಲಿಲ್ಲ. ಅವುಗಳಿಗೆ ಧನ್ಯವಾದ ಹೇಳಬೇಕು" ಎಂದು ಚೌಧುರಿ ಹೇಳಿದ್ದಾರೆ.
ಕೃಪೆ: www.indiatimes.com







