ಟಿಪ್ಪು ಜಯಂತಿ: ನಿಷೇಧಾಜ್ಞೆ ನಡುವೆಯೂ ಬಿಜೆಪಿ ಪ್ರತಿಭಟನೆ

ಉಡುಪಿ, ನ.8: ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಜಾರಿಗೊಳಿಸಿರುವ ನಿಷೇಧಾಜ್ಞೆಯ ನಡುವೆಯೇ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿಯು ಇಂದು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಸಿತು.
ಜೋಡುಕಟ್ಟೆಯಿಂದ ಕ್ಲಾಕ್ ಟವರ್‌ವರೆಗೆ ಬಿಜೆಪಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಗೆ ಪೊಲೀಸರ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕ್ಲಾಕ್ ಟವರ್ ಎದುರು ಪ್ರತಿಭಟನಾ ಸಭೆಯನ್ನು ನಡೆಸಲಾಯಿತು. ಈ ವೇಳೆ ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ನಿರ್ದೇಶನದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.
ಸಭೆಯನ್ನುದ್ದೇಶಿಸಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, ರಾಜ್ಯ ಸರಕಾರ ಓಟು ಬ್ಯಾಂಕಿಗಾಗಿ ಟಿಪ್ಪು ಜಯಂತಿ ಆಚರಿಸುತ್ತಿದೆ. ಹಿಂದೂ ಗಳ ಮೇಲೆ ದಾಳಿ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಧುನಿಕ ಕಾಲದ ಟಿಪ್ಪು ಸುಲ್ತಾನ್ ಆಗಿದ್ದಾರೆ. ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಯನ್ನು ಸರಕಾರ ಆಚರಿಸಬಾರದು. ಈಗಾಗಲೇ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಭಾರತಿ ಮುದ್ದಮ್ಮ, ಮುಖಂಡರಾದ ದಿನಕರ ಬಾಬು, ಉದಯ ಕುಮಾರ್ ಶೆಟ್ಟಿ, ಸಲೀಂ ಅಂಬಾಗಿಲು, ಗೀತಾಂಜಲಿ ಸುವರ್ಣ, ಶೀಲಾ ಕೆ.ಶೆಟ್ಟಿ, ನಳಿನಿ ರಾವ್, ಯಶ್ಪಾಲ್ ಸುವರ್ಣ, ನಯನ ಗಣೇಶ್, ವಿಎಚ್‌ಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.







