94ಸಿಸಿಯಲ್ಲಿ 3 ಸೆಂಟ್ಸ್ ನಿವೇಶನ ನೀಡಲು ಪ್ರಯತ್ನ: ಸೊರಕೆ

ಉಡುಪಿ, ನ.8: 94ಸಿಸಿ ಕಾಯ್ದೆಯಡಿಯಲ್ಲಿ ಒಂದೂವರೆ ಸೆಂಟ್ಸ್ ಬದಲು ಮೂರು ಸೆಂಟ್ಸ್ ಜಾಗ ಮಂಜೂರು ಮಾಡಿ ಹಕ್ಕುಪತ್ರ ನೀಡುವ ಕುರಿತು ಚರ್ಚಿಸಲು ಶಾಸಕರ ಸಭೆ ಕರೆಯುವುದಾಗಿ ಕಂದಾಯ ಸಚಿವರು ಭರವಸೆ ನೀಡಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ನಗರ ಪ್ರದೇಶದಲ್ಲಿರು ವವರಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಅಲೆವೂರು ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಅಲೆವೂರು, ಕೊರಂಗ್ರಪಾಡಿ, ಉದ್ಯಾವರ ಗ್ರಾಮಗಳ ವ್ಯಾಪ್ತಿಯ ಜನ ಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. 94 ಸಿಯಲ್ಲಿನ ಎಲ್ಲ ಅರ್ಜಿಗಳನ್ನು ಶೀಘ್ರವೇ ಇತ್ಯರ್ಥ ಪಡಿಸಲಾಗುವುದು. ಕುಮ್ಕಿ ಜಾಗವನ್ನು ಕೂಡ ನಿವೇಶನ ಹಂಚಿಕೆಗೆ ಬಳಸಿಕೊಳ್ಳಬಹುದು ಎಂಬು ದಾಗಿ ಕಂದಾಯ ಇಲಾಖೆ ಈಗಾಗಲೇ ಸುತ್ತೋಲೆ ಹೊರಡಿಸಿದೆ ಎಂದರು.
ಶ್ರೀಮಂತರು ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡರೂ ಕ್ರಮ ತೆಗೆದುಕೊಳ್ಳಲಾಗದ ಅಧಿಕಾರಿಗಳಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ನಿವೇಶನ ನೀಡಲು ಜಾಗ ಕೂಡ ಇಲ್ಲ. ಆದುದರಿಂದ ಈ ಧೋರಣೆಯನ್ನು ಬಿಟ್ಟು ಎಲ್ಲರಿಗೂ ನ್ಯಾಯ ದೊರಕಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಅಲೆವೂರು ಗ್ರಾಪಂ ವ್ಯಾಪ್ತಿಯ ನೈಲಪಾದೆ ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಅನುದಾನ ಮಂಜೂರು ಮಾಡಿ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಲಾಗುವುದು. ಬಹುಗ್ರಾಮ ಯೋಜನೆಯಡಿ 26 ಕೋಟಿ ರೂ. ವೆಚ್ಚದಲ್ಲಿ ಮಣಿಪುರ ಹೊಳೆಯಿಂದ ಅಲೆವೂರು ಸೇರಿದಂತೆ ಸುತ್ತಲಿನ ಗ್ರಾಪಂಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕುರಿತು ಸರ್ವೆ ಕಾರ್ಯ ನಡೆಸಲಾಗುತ್ತಿದೆ ಎಂದರು.
ಯುಪಿಸಿಎಲ್‌ನಿಂದ ಉಡುಪಿ ತಾಲೂಕಿಗೆ ದಿನದ 24ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದ್ದು, ಮುಂದೆ ಎಲ್ಲರಿಗೂ ಉಚಿತವಾಗಿ ವಿದ್ಯುತ್ ನೀಡುವಂತೆ ಒತ್ತಾಯಿಸಲಾಗುವುದು. ಅದೇರೀತಿ ಕಂಪೆನಿಯವರು ಹೈಮಾಸ್ಟ್, ಸೋಲಾರ್ ದೀಪ ಅಳವಡಿಕೆ, ಕೆರೆಯ ಅಭಿವೃದ್ಧಿ ಮತ್ತು ಆಸ್ಪತ್ರೆ ನಿರ್ಮಿಸುವ ಕಾರ್ಯಕ್ರಮವನ್ನು ಮಾಡಬೇಕು ಎಂದು ಅವರು ಹೇಳಿದರು.
ಅಲೆವೂರು ಪ್ರಗತಿನಗರ ಕಾರ್ಮಿಕ ಕಾಲನಿಯ 124 ಕುಟುಂಬಗಳಿಗೆ ಮನೆ ನಿವೇಶನ ಮಂಜೂರು ಮಾಡಿ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಅದೇ ರೀತಿ 94ಸಿಸಿಯಲ್ಲಿ ಮಂಜೂರಾದ ಹಕ್ಕುಪತ್ರ, ಸಂಧ್ಯಾ ಸುರಕ್ಷಾ ಯೋಜನೆಯ ಆದೇಶ ಪತ್ರ ಹಾಗೂ ಇನ್ನಿತರ ಸರಕಾರಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸದಸ್ಯರಾದ ರಜನಿ, ಗಿರೀಶ್ ಕುಮಾರ್ ಉದ್ಯಾವರ, ಬೇಬಿ ರಾಜೇಶ್, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ಉಪಾಧ್ಯಕ್ಷೆ ವಿಜಯ ಕುಮಾರಿ, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಅಲೆವೂರು ಶ್ರೀಧರ್ ಶೆಟ್ಟಿ, ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ತಾಪಂ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಉಪಸ್ಥಿತರಿದ್ದರು.
ಅಲೆವೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೂದ ಪೂಜಾರಿ ಸ್ವಾಗತಿಸಿದರು. ಪ್ರವೀಣ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







