ಗೂಢಚರ್ಯೆ ಆರೋಪ : ಮೂವರು ದೂತವಾಸ ಅಧಿಕಾರಿಗಳು ಭಾರತಕ್ಕೆ

ಇಸ್ಲಾಮಾಬಾದ್, ನ.8: ಭಾರತೀಯ ಗೂಢಚರ್ಯ ಸಂಸ್ಥೆಗಳ ಏಜೆಂಟರೆಂದು ಪಾಕಿಸ್ತಾನ ಆರೋಪಿಸಿದ್ದ ಭಾರತೀಯ ದೂತವಾಸದ 8 ಮಂದಿ ಅಧಿಕಾರಿಗಳ ಪೈಕಿ ಮೂವರು ಇಂದು ಭಾರತಕ್ಕೆ ಹೊರಟಿದ್ದಾರೆಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಮೂವರು ಅಧಿಕಾರಿಗಳು ಇಂದು ಮುಂಜಾನೆ ಇಸ್ಲಾಮಾಬಾದ್‌ನಿಂದ ದುಬೈಗೆ ತೆರಳಿದರೆಂದು ಮೂಲಗಳನ್ನುಲ್ಲೇಖಿಸಿ ಜಿಯೊ ನ್ಯೂಸ್ ವರದಿ ಮಾಡಿದೆ. ಉಳಿದ ಐವರು ನೆಲ ಮಾರ್ಗದಿಂದ ವಾಘಾ ಗಡಿಯ ಮೂಲಕ ಭಾರತಕ್ಕೆ ಹೋಗಲಿದ್ದಾರೆಂದು ಅದು ಹೇಳಿದೆ.
ಭಾರತೀಯ ದೂತವಾಸದ 8 ಮಂದಿ ಅಧಿಕಾರಿಗಳು ರಾ ಹಾಗೂ ಗುಪ್ತಚರ ಬ್ಯೂರೊದ ಏಜೆಂಟರಾಗಿದ್ದಾರೆಂದು ಪಾಕಿಸ್ತಾನದ ವಿದೇಶಾಂಗ ವಕ್ತಾರ ನಫೀಸ್ ಝಕಾರಿಯಾ ಕಳೆದ ವಾರ ಆರೋಪಿಸಿದ್ದರು.
ಎಷ್ಟು ಮಂದಿ ಭಾರತೀಯ ಅಧಿಕಾರಿಗಳು ಪಾಕಿಸ್ತಾನದಿಂದ ಹೊರಟಿದ್ದಾರೆ ಹಾಗೂ ದೇಶ ಬಿಡುವ ನಿರೀಕ್ಷೆಯಿದೆಯೆಂಬ ಕುರಿತು ಅಧಿಕೃತ ದೃಢೀಕರಣ ಹೊರಬಿದ್ದಿಲ್ಲ.
Next Story





