ಟ್ರಾವೆಲ್ ಏಜೆನ್ಸಿಗೆ ಪೊಲೀಸ್ ದಾಳಿ: ಹಲವು ನಕಲಿ ದಾಖಲೆಪತ್ರಗಳ ವಶ

ಮಂಜೇಶ್ವರ, ನ.8: ಉಪ್ಪಳದಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಟ್ರಾವೆಲ್ ಏಜೆನ್ಸಿ ಸಂಸ್ಥೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು, ಹಲವು ಅನಧಿಕೃತ ದಾಖಲೆಪತ್ರಗಳು, ಕಂಪ್ಯೂಟರ್‌ಗಳು, ಹಾಗೂ ಸೀಲ್‌ಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಓರ್ವನನ್ನು ಕಸ್ಟಡಿಗೆ ಪಡೆದಿದ್ದಾರೆ.
ಉಪ್ಪಳದ ಪೆಟ್ರೋಲ್ ಬಂಕ್ ಸಮೀಪದಲ್ಲಿದ್ದ ಪೆರಿಂಗಡಿ ನಿವಾಸಿ ಅನ್ಸಾರ್ ಎಂಬಾತನ ಮಾಲಕತ್ವದ ಟ್ರಾವೆಲ್ ಏಜೆನ್ಸಿಗೆ ದಾಳಿ ನಡೆಸಲಾಗಿದ್ದು, ಏಜೆನ್ಸಿಗೆ ಪೊಲೀಸರು ಬೀಗ ಜಡಿದಿದ್ದಾರೆ.
ಈ ಸಂಸ್ಥೆಯನ್ನು ಕೇಂದ್ರೀಕರಿಸಿ ಹಲವು ಕಾನೂನು ವಿರೋಧಿ ಚಟುವಟಿಕೆಗಳು ನಡೆಸುತ್ತಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಈ ಏಜೆನ್ಸಿಯ ಮೇಲೆ ನಿಗಾ ಇಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಕುಂಬಳೆ ಸಿಐ ವಿ.ವಿ. ಮನೋಜ್, ಮಂಜೇಶ್ವರ ಎಸ್ಸೈ ಪಿ.ಪ್ರಮೋದ್, ಜಿಲ್ಲಾ ಪೊಲೀಸ್ ಸ್ಕ್ವಾಡ್, ಸೈಬರ್ ಸೆಲ್ ತಂಡ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದೆ.
ತಪಾಸಣೆ ವೇಳೆ ಸುಮಾರು 70 ಪಾಸ್‌ಪೋರ್ಟ್‌ಗಳು, ಪೆನ್‌ಡ್ರೈವ್‌ಗಳು, ಮೂರು ಕಂಪ್ಯೂಟರ್‌ಗಳು, ಹಾರ್ಡ್‌ಡಿಸ್ಕ್‌ಗಳು, ಹಲವಾರು ಬ್ಯಾಂಕ್ ಪಾಸ್ ಪುಸ್ತಕಗಳು, ಲೆಟರ್‌ಹೆಡ್‌ಗಳು, ಸೀಲ್‌ಗಳು, ವಿವಿಧ ಶಾಲಾ ಕಾಲೇಜುಗಳ ಲೆಟರ್ ಹೆಡ್‌ಗಳು, ಎಕ್ಸ್‌ಪೀರಿಯನ್ಸ್ ಸರ್ಟಿಫಿಕೇಟ್‌ಗಳು, ವಿವಿಧ ಸಂಸ್ಥೆಗಳ ಹೆಸರಲ್ಲಿರುವ ಸ್ಲಿಪ್‌ಗಳು, ಹಡಗಿನಲ್ಲಿ ಉದ್ಯೋಗಕ್ಕೆ ಅಗತ್ಯವುಳ್ಳ ದಾಖಲೆಪತ್ರಗಳು, ಹಲವು ಸರಕಾರಿ ಸಂಸ್ಥೆಗಳ ಲೆಟರ್ ಹೆಡ್‌ಗಳು ಪತ್ತೆಯಾಗಿವೆ. ಇವುಗಳೆಲ್ಲವನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಸೊತ್ತುಗಳ ವೌಲ್ಯ 1,32,500 ರೂ. ಎಂದು ತಿಳಿದುಬಂದಿದೆ.
ನಕಲಿ ದಾಖಲೆಪತ್ರಗಳನ್ನು ಬಳಸಿ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸನ್ಸ್, ಮರಳು ಪಾಸ್ ತಯಾರಿ ಇತ್ಯಾದಿ ಆರೋಪಗಳಿಗೆ ಸಂಬಂಧಪಟ್ಟಂತೆ ಇತ್ತೀಚೆಗೆ ಮಂಜೇಶ್ವರ ಪೊಲೀಸರು ಹಲವು ದೂರುಗಳನ್ನು ದಾಖಲಿಸಿಕೊಂಡಿದ್ದಾರೆ.







