ಅಬುಧಾಬಿ ಕನ್ನಡಿಗರಿಂದ ರಾಜ್ಯೋತ್ಸವ

ಅಬುಧಾಬಿ, ನ.8: ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಅಬುಧಾಬಿಯ ಇಂಡಿಯನ್ ಸೋಶಿಯಲ್ ಸೆಂಟರ್ ಸಭಾಗೃಹದಲ್ಲಿ ಸಮಾರಂಭ ನಡೆಯಿತು. ಈ ಸಂಘಟನೆಯು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಕರ್ನಾಟಕದ ಪರಂಪರೆ, ಭಾಷೆ, ಸಂಸ್ಕೃತಿ ಹಾಗೂ ಇತಿಹಾಸವನ್ನು ಉತ್ತೇಜಿಸುವ ಸಂಘಟನೆಯಾಗಿದೆ.
ಇದರ ಅಂಗವಾಗಿ ಕರ್ನಾಟಕದ ಉಡುಗೆ ತೊಡುಗೆಗಳನ್ನು ಧರಿಸಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ಕರ್ನಾಟಕ ನವರಸೋಲ್ಲಾಸ ಕಾರ್ಯಕ್ರಮದ ಮೂಲಕ ವಿದುಷಿ ರೋಹಿಣಿ ಅನಂತ್ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ಇದೇ ವೇಳೆ ಬಹುಮುಖ ಪ್ರತಿಭೆ, ಕಲಾ ನಿರ್ದೇಶಕ ಬಿ.ಕೆ.ಗಣೇಶ್ ರೈ ಅವರಿಗೆ ದ.ರಾ.ಬೇಂದ್ರೆ ಪುರಸ್ಕಾರವನ್ನು ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ ಪ್ರದಾನ ಮಾಡಿದರು.
10 ಮತ್ತು 12ನೆ ತರಗತಿಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಬುಧಾಬಿ ಕರ್ನಾಟಕ ಸಂಘ ಆಯೋಜಿಸಿದ್ದ ಯುಎಇ ಮಟ್ಟದ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸುಧಾಕರ ಪೇಜಾವರ, ವಿಜಯಾ ಭಟ್ ಹಾಗೂ ರವಿರಾಜ್ ತಂತ್ರಿ ತೀರ್ಪುಗಾರರಾಗಿದ್ಧರು. ಬಳಿಕ ಮನೋಹರ ತೋನ್ಸೆ ಹನಿಗವನ ವಾಚನ ಮಾಡಿದರು.
ಇರ್ಷಾದ್ ಮೂಡುಬಿದಿರೆ, ಪ್ರಕಾಶ್ ರಾವ್ ಮಯ್ಯೆರ್, ಗೋಪಿನಾಥ ರಾವ್, ಅರ್ಷದ್ ಹುಸೇನ್, ಅವಿನಾಶ್ ಭಟ್, ಸತೀಶ್ ಕುಲಾಲ್ ಹಾಗೂ ಆರತಿ ಗತಿಕಾರ್ ವಾಚನ ಮಾಡಿದರು.
ಇಂಡಿಯಾ ಸೋಶಿಯಲ್ ಸೆಂಟರ್‌ನ ಉಪಾಧ್ಯಕ್ಷ ರಾಜನ್ ಝಚಾರಿಯಾ, ಸಾಂಸ್ಕೃತಿಕ ಕಾರ್ಯದರ್ಶಿ ಜಾನ್ ವೇಗಸ್, ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರನ್ನು ಸ್ಮಾನಿಸಲಾಯಿತು. ಡಾ.ಬಿ.ಆರ್.ಶೆಟ್ಟಿ, ಡಾ.ಚಂದ್ರಕುಮಾರಿ ಬಿ.ಆರ್.ಶೆಟ್ಟಿ ಹಾಜರಿದ್ದರು.







