ಇಂದು ಮೊದಲ ಟೆಸ್ಟ್ ಆರಂಭ: ಇಂಗ್ಲೆಂಡ್‌ಗೆ ಭಾರತದ ಸವಾಲು

ರಾಜ್‌ಕೋಟ್, ನ.8: ವೆಸ್ಟ್‌ಇಂಡೀಸ್ ಹಾಗೂ ನ್ಯೂಝಿಲೆಂಡ್ ವಿರುದ್ಧ ಸತತ ಸರಣಿಯನ್ನು ಜಯಿಸಿರುವ ವಿಶ್ವದ ನಂ.1 ಟೆಸ್ಟ್ ತಂಡ ಭಾರತ ಬುಧವಾರ ಇಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಮೂರು ದಶಕಗಳ ಬಳಿಕ ಭಾರತದ ನೆಲದಲ್ಲಿ ಮೊದಲ ಬಾರಿ ಐದು ಪಂದ್ಯಗಳಿರುವ ಟೆಸ್ಟ್ ಸರಣಿ ನಡೆಯುತ್ತಿದೆ. ರಾಜ್‌ಕೋಟ್ ಇದೇ ಮೊದಲ ಬಾರಿ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಕೊಂಡಿದೆ.
ಭರ್ಜರಿ ಫಾರ್ಮ್‌ನಲ್ಲಿರುವ ಭಾರತ ಹಾಗೂ ಅನಿಶ್ಚಿತತೆ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್ ಪರಸ್ಪರ ಮುಖಾಮುಖಿಯಾಗುತ್ತಿವೆ. ನಾಲ್ಕು ವರ್ಷಗಳ ಹಿಂದೆ ಉಭಯ ತಂಡಗಳು ಕೊನೆಯ ಬಾರಿ ಟೆಸ್ಟ್ ಸರಣಿಯಲ್ಲಿ ಆಡಿದ್ದವು. 2012ರಲ್ಲಿ ನಡೆದಿದ್ದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಜಯ ಸಾಧಿಸಿತ್ತು.
ಸ್ಪಿನ್ನರ್‌ಗಳಾದ ಗ್ರೇಮ್ ಸ್ವಾನ್ ಹಾಗೂ ಮಾಂಟಿ ಪನೇಸರ್ ಆಂಗ್ಲರಿಗೆ ಗೆಲುವು ತಂದುಕೊಟ್ಟಿದ್ದರು. ಆದರೆ, ಈ ಬಾರಿಯ ತಂಡದಲ್ಲಿ ಈ ಇಬ್ಬರು ಸ್ಥಾನ ಪಡೆದಿಲ್ಲ. ಹಾಲಿ ನಾಯಕ ಅಲೆಸ್ಟೈರ್ ಕುಕ್ ಹಾಗೂ ವಿವಾದಿತ ಆಟಗಾರ ಕೇವಿನ್ ಪೀಟರ್ಸನ್ ಇಂಗ್ಲೆಂಡ್‌ನ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್ ವಿರುದ್ಧ ಸರಣಿ ಸೋತಿದ್ದ ತಂಡದಲ್ಲಿದ್ದ ವಿರಾಟ್ ಕೊಹ್ಲಿ ಈ ಬಾರಿ ತಂಡವನ್ನು ಮುನ್ನಡೆಸುತ್ತಿದ್ದಾರೆ. 2 ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದಿದ್ದ 5 ಪಂದ್ಯಗಳ ಸರಣಿಯು ಭಾರತಕ್ಕೆ ಪಾಠವಾಗಿದೆ.
ಆಂಗ್ಲರು ಈ ಬಾರಿ ಬಾಂಗ್ಲಾದೇಶದ ವಿರುದ್ಧ ಢಾಕಾದಲ್ಲಿ ಮೊದಲ ಬಾರಿ ಆಘಾತಕಾರಿ ಸೋಲನುಭವಿಸಿ ಭಾರತಕ್ಕೆ ಆಗಮಿಸಿದ್ದಾರೆ. ವಾರದ ಹಿಂದೆ ಭಾರತಕ್ಕೆ ಕಾಲಿಟ್ಟಿರುವ ಇಂಗ್ಲೆಂಡ್ ಒಂದೂ ಅಭ್ಯಾಸ ಪಂದ್ಯವನ್ನೂ ಆಡಿಲ್ಲ. ಸ್ಟಾರ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಅವರು ಭುಜ ನೋವಿನಿಂದ ಇನ್ನೂ ಫಿಟ್‌ನೆಸ್ ಪಡೆದಿಲ್ಲ. 100ನೆ ಟೆಸ್ಟ್ ಪಂದ್ಯ ಆಡುತ್ತಿರುವ ಕುಕ್ ಹಾಗೂ ಸ್ಟುವರ್ಟ್ ಬ್ರಾಡ್ ಭಾರತ ತಂಡ ನಮಗಿಂತ ಬಲಿಷ್ಠವಾಗಿದೆ ಎಂದು ಹೇಳಿ ಯುದ್ದಕ್ಕೆ ಮೊದಲೇ ಶಸ್ತ್ರಾಸ್ತ್ರ ಕೆಳಗಿಡುವ ಸೂಚನೆ ನೀಡಿದ್ದಾರೆ.
ಮತ್ತೊಂದೆಡೆ, ಆಕ್ರಮಣಕಾರಿ ಶೈಲಿಯ ಕೊಹ್ಲಿ ನಾಯಕತ್ವದಲ್ಲಿ ಭಾರತ ಭರ್ಜರಿ ಫಾರ್ಮ್‌ನಲ್ಲಿದೆ. ಕೋಚ್ ಅನಿಲ್ ಕುಂಬ್ಳೆ ತಂಡವನ್ನು ಚೆನ್ನಾಗಿ ಸಜ್ಜುಗೊಳಿಸಿದ್ದು, ತಂಡದ ಸದಸ್ಯರು ನ್ಯೂಝಿಲೆಂಡ್ ವಿರುದ್ಧದ ಕ್ಲೀನ್‌ಸ್ವೀಪ್(3-0) ಸಾಧನೆಯನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದ್ದಾರೆ.
ಬಿಸಿಸಿಐ ನಿರಂತರವಾಗಿ ವಿರೋಧಿಸುತ್ತಾ ಬಂದಿರುವ ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ(ಡಿಆರ್‌ಎಸ್)ಯನ್ನು ಭಾರತದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಅಳವಡಿಸಲಾಗುತ್ತಿದೆ.
ಭಾರತ 2012ರಲ್ಲಿ ಕೋಲ್ಕತಾದಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಬಳಿಕ ಸ್ವದೇಶದಲ್ಲಿ ಸತತ 14 ಪಂದ್ಯಗಳನ್ನು ಗೆದ್ದುಕೊಂಡು ಅಜೇಯ ದಾಖಲೆ ಕಾಯ್ದುಕೊಂಡಿದೆ. ಕೆಎಲ್ ರಾಹುಲ್, ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಗಾಯಗೊಂಡಿದ್ದರೂ ಭಾರತದ ಬ್ಯಾಟಿಂಗ್ ಸರದಿ ಬಲಿಷ್ಠವಾಗಿದೆ.
ಕೊಹ್ಲಿ ಮತ್ತೊಮ್ಮೆ ಬ್ಯಾಟಿಂಗ್ ನೇತೃತ್ವವಹಿಸಲಿದ್ದು, ರಹಾನೆ, ಮುರಳಿ ವಿಜಯ್, ಗೌತಮ್ ಗಂಭೀರ್ ಹಾಗೂ ಚೇತೇಶ್ವರ ಪೂಜಾರ ಸಾಥ್ ನೀಡಲಿದ್ದಾರೆ. ಲೋಕಲ್ ಹೀರೋ ಪೂಜಾರ ತವರು ಮೈದಾನದಲ್ಲಿ ಮಿಂಚಲು ಎದುರು ನೋಡುತ್ತಿದ್ದಾರೆ.
ಕಿವೀಸ್ ವಿರುದ್ಧ ಸರಣಿಯಲ್ಲಿ ರೋಹಿತ್ ಶರ್ಮ ಗಾಯಗೊಂಡಿರುವ ಕಾರಣ ಕರ್ನಾಟಕದ ಕರುಣ್ ನಾಯರ್ ಅಥವಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ರಾಜ್‌ಕೋಟ್‌ನಲ್ಲಿ 6ನೆ ಕ್ರಮಾಂಕದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆಗೈಯುವ ಸಾಧ್ಯತೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂ ಪಿಚ್ ಹೇಗೆ ವರ್ತಿಸಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.
ನಾಲ್ಕನೆ ದಿನದಾಟದ ಬಳಿಕ ಪಿಚ್ ಸ್ಪಿನ್ನರ್‌ಗೆ ನೆರವು ನೀಡಲಿದೆ ಎಂದು ಎಸ್‌ಸಿಎ ಕಾರ್ಯದರ್ಶಿ ನಿರಂಜನ್ ಶಾ ಹೇಳಿದ್ದಾರೆ.16 ಪ್ರಥಮ ದರ್ಜೆ ಪಂದ್ಯಗಳಲ್ಲಿ ಸ್ಪಿನ್ನರ್‌ಗಳು 20 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಸ್ಪಿನ್ ವಿಭಾಗದಲ್ಲಿ ಭಾರತ ಸಂಪೂರ್ಣ ಮೇಲುಗೈ ಹೊಂದಿದೆ. ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳಿಗೆ ಸಮಸ್ಯೆಯಾಗಬಲ್ಲರು. ಭಾರತ ಮೂವರು ಸ್ಪಿನ್ನರ್‌ಗಳಾದ ಅಶ್ವಿನ್, ಜಡೇಜ ಹಾಗೂ ಅಮಿತ್ ಮಿಶ್ರಾ ಸ್ಪಿನ್ನರ್‌ಗಳ ಬಲ ಹೊಂದಿದ್ದು, ಮಿಶ್ರಾ ಮೊದಲ ಪಂದ್ಯದಲ್ಲಿ ಆಡುವ ಸಾಧ್ಯತೆಯಿಲ್ಲ.
ಅನಾರೋಗ್ಯದಿಂದಾಗಿ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಇಶಾಂತ್ ಶರ್ಮ ಸರಣಿಗೆ ವಾಪಸಾಗಿದ್ದು, ವೇಗದ ವಿಭಾಗಕ್ಕೆ ಬಲ ಬಂದಿದೆ. ಮೇಲ್ನೋಟಕ್ಕೆ ಭಾರತ ತಂಡಕ್ಕೆ ಇಂಗ್ಲೆಂಡ್ ವಿರುದ್ಧ ಕಳೆದ ಮೂರು ಸರಣಿಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶವಿದೆ. ಆ್ಯಂಡರ್ಸನ್ ಅನುಪಸ್ಥಿತಿ ಭಾರತಕ್ಕೆ ಲಾಭವಾಗಿ ಪರಿಣಮಿಸಿದೆ.
ಪ್ರವಾಸಿ ತಂಡದ ವೇಗದ ಬೌಲಿಂಗ್‌ನಲ್ಲಿ ಸ್ಟುವರ್ಟ್ ಬ್ರಾಡ್, ಸ್ಟೀವನ್ ಫಿನ್, ಕ್ರಿಸ್ ವೋಕ್ಸ್ ಹಾಗೂ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರಿದ್ದಾರೆ. ಆಲ್‌ರೌಂಡರ್ ಮೊಯಿನ್ ಅಲಿ ತಂಡದ ಮುಖ್ಯ ಸ್ಪಿನ್ ಬೌಲರ್ ಆಗಿದ್ದಾರೆ. ಝಾಫರ್ ಅನ್ಸಾರಿ ,ಆದಿಲ್ ರಶೀದ್ ಹಾಗೂ ಆಫ್ ಸ್ಪಿನ್ನರ್ ಗರೆತ್ ಬ್ಯಾಟಿ ಅವರಿದ್ದಾರೆ.
ಅಂಕಿ-ಅಂಶ
*ಭಾರತ ಈ ತನಕ 33 ಬಾರಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದೆ. ಈ ಸರಣಿಯಲ್ಲಿ 2ಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದುಕೊಂಡಿಲ್ಲ.
*ಸ್ಟುವರ್ಟ್ ಬ್ರಾಡ್ 100ನೆ ಟೆಸ್ಟ್ ಪಂದ್ಯ ಆಡುತ್ತಿರುವ ಇಂಗ್ಲೆಂಡ್‌ನ 14ನೆ ಆಟಗಾರ. ಬ್ರಾಡ್ ಭಾರತ ವಿರುದ್ಧ ವಿದೇಶಿ ಸರಣಿಯಲ್ಲಿ 145.5 ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ.
* 2000ರ ಬಳಿಕ ಭಾರತಕ್ಕೆ ಪ್ರವಾಸಗೈದಿರುವ ತಂಡಗಳ ಪೈಕಿ ಇಂಗ್ಲೆಂಡ್‌ನ ದಾಖಲೆ ಶ್ರೇಷ್ಠವಾಗಿದೆ. ಆಂಗ್ಲರು 3ರಲ್ಲಿ ಜಯ ಸಾಧಿಸಿದರೆ, ನಾಲ್ಕು ಪಂದ್ಯಗಳನ್ನು ಸೋತಿದ್ದಾರೆ.
ಭಾರತ(ಸಂಭಾವ್ಯರು): ಗೌತಮ್ ಗಂಭೀರ್, ಎಂ. ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ಕರುಣ್ ನಾಯರ್/ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ವೃದ್ದಿಮಾನ್ ಸಹಾ(ವಿಕೆಟ್‌ಕೀಪರ್), ರವೀಂದ್ರ ಜಡೇಜ, ಮುಹಮ್ಮದ್ ಶಮಿ, ಇಶಾಂತ್ ಶರ್ಮ/ಅಮಿತ್ ಮಿಶ್ರಾ/ಉಮೇಶ್‌ಯಾದವ್.
ಇಂಗ್ಲೆಂಡ್(ಸಂಭಾವ್ಯರು): ಅಲೆಸ್ಟೈರ್ ಕುಕ್(ನಾಯಕ), ಹಸೀಬ್ ಹಮೀದ್, ಜೋ ರೂಟ್, ಬೆನ್ ಡೆಕೆಟ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋ(ವಿಕೆಟ್‌ಕೀಪರ್), ಕ್ರಿಸ್ ವೋಕ್ಸ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಗಾರೆತ್ ಬ್ಯಾಟಿ.
ಪಂದ್ಯ ಅರಂಭದ ಸಮಯ: ಬೆಳಗ್ಗೆ 9:30







