ಟಿಪ್ಪುಜಯಂತಿ ಹಿನ್ನೆಲೆ
ಶಿವಮೊಗ್ಗ, ಕೊಡಗಿನಾದ್ಯಂತ ಬಿಗಿ ಪೊಲೀಸ್ ಪಹರೆ

ಶಿವಮೊಗ್ಗ, ನ. 8: ಟಿಪ್ಪು ಜಯಂತಿ ಆಚರಣೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸುವಂತೆ ಜಿಲ್ಲಾಡಳಿತಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ನ. 10 ರಂದು ಶಿವಮೊಗ್ಗ ನಗರದಲ್ಲಿ ವ್ಯಾಪಕ ಕಟ್ಟೆಚ್ಚರವಹಿಸಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನ ವ್ಯವಸ್ಥೆ ಮಾಡಿದ್ದು, ಹದ್ದಿನ ಕಣ್ಗಾವಲಿರಿಸಿದೆ. ನ.9ರಿಂದಲೇ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿ ಸಲಾಗುವುದು. ನ. 10 ರಂದು ನಗರಾದ್ಯಂತ ಗಸ್ತು ವ್ಯವಸ್ಥೆ ಬಿಗಿಗೊಳಿಸಲಾಗುತ್ತಿದ್ದು, ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ಚಲನವಲನಗಳ ಮೇಲೆ ಪೊಲೀಸರು ತೀವ್ರ ನಿಗಾವಹಿ ಸಲಿದ್ದಾರೆ. ಅಲ್ಲದೆ, ಹೊರ ಪ್ರದೇಶಗಳಿಂದ ನಗರಕ್ಕೆ ಆಗಮಿಸುವ ವಾಹನಗಳು ಮತ್ತು ವ್ಯಕ್ತಿಗಳ ಮೇಲೆಯೂ ಕಣ್ಣಿಡಲಾಗುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಮಂಗಳವಾರ ಹಿಂದೂ ಸಂರಕ್ಷಣಾ ವೇದಿಕೆಯು ಗೋಪಿ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಿಷೇಧಾಜ್ಞೆ ಸಡಿಲಗೊಳಿಸಲಾಗಿತ್ತು. ನ.10ರಂದು ಟಿಪ್ಪು ಜಯಂತಿಯ ಸಭಾ ಕಾರ್ಯಕ್ರಮ ನಡೆಯುವ ಕುವೆಂಪು ರಂಗಮಂದಿರ ಸುತ್ತಮುತ್ತ ಬೆಳಗ್ಗೆ 8ರಿಂದ ಮಧ್ಯಾಹ್ನ 3ಗಂಟೆಯವರೆಗೆ ನಿಷೇಧಾಜ್ಞೆ ತೆರವುಗೊಳಿಸಲಾಗುವುದು. ಟಿಪ್ಪು ಜಯಂತಿಗೆ ಸಂಬಂಧಿಸಿದಂತೆ ಮೆರವಣಿಗೆ ನಡೆಸುವುದರ ಮೇಲೆ ಜಿಲ್ಲಾಡಳಿತ ನಿಷೇಧ ಹೇರಿದೆ. ಚೆಕ್‌ಪೋಸ್ಟ್: ಬಂದೋಬಸ್ತ್ ಕಾರ್ಯಕ್ಕಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್. ಎ.ಎಫ್.) ನ ತುಕುಡಿ ನಗರಕ್ಕೆ ಆಗಮಿಸಿದೆ. ಸ್ಥಳೀಯ ಸಿವಿಲ್, ಡಿ.ಎ.ಆರ್., ಕೆಎಸ್ಸಾರ್ಪಿ
ಪೊಲೀಸರ ಜೊತೆಗೆ ಹಾವೇರಿ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಿಂದಲೂ ಹೆಚ್ಚಿ ನ ಪೊಲೀಸ್ ಪಡೆಯನ್ನು ಕರೆಸಿಕೊಳ್ಳಲಾಗುತ್ತಿದೆ. ನಗರಕ್ಕೆ ಸಂಪರ್ಕ ಕಲ್ಪಿಸುವ ಆರು ಪ್ರಮುಖ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ನಗರಕ್ಕಾಗಮಿಸುವವರ ಮೇಲೆ ಪೊಲೀಸರು ಕಣ್ಣಿಡಲು ನಿರ್ಧರಿಸಿದ್ದಾರೆ. ಸುಗಮ-ಶಾಂತಿಯುತ ಟಿಪ್ಪು ಜಯಂತಿ ಆಚರಣೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಗರದಲ್ಲಿ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಸರ್ಪಗಾವಲು ಹಾಕಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್, ಈ ಮೂಲಕ ಗೊಂದಲ ಸೃಷ್ಟಿಸಲು ಮುಂದಾಗುವ ಕಿಡಿಗೇಡಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸನ್ನದ್ಧವಾಗಿದೆ.
ನ.10ರ ರಾತ್ರಿ 10ರ ವರೆಗೆ ನಿಷೇಧಾಜ್ಞೆ ಜಾರಿ
ವಾಹನ ಸಹಿತ ಜನರ ಮೇಲೆ ಪೊಲೀಸ್ ಕಣ್ಗಾವಲು
ಆರ್.ಎ.ಎಫ್. ತುಕಡಿ ನಿಯೋಜನೆ





