ಮೃತದೇಹಗಳ ಪತ್ತೆಗೆ ಅಗತ್ಯ ಕ್ರಮಕ್ಕೆ ಸೂಚನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು, ನ. 8: ‘ಮಾಸ್ತಿ ಗುಡಿ’ ಚಿತ್ರದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಸಾವನ್ನಪ್ಪಿರುವ ಖಳನಟರಾದ ಅನಿಲ್ ಮತ್ತು ಉದಯ್ ಮೃತದೇಹಗಳ ಪತ್ತೆಗೆ ತ್ವರಿತ ಕ್ರಮ ಕೈಗೊಳ್ಳಲು ಗೃಹ ರಕ್ಷಕ ಮತ್ತು ಅಗ್ನಿಶಾಮಕ ದಳದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಿನ್ನೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್‌ನಿಂದ ಕೆರೆಗೆ ಜಿಗಿದು ಇಬ್ಬರು ಮೃತಪಟ್ಟಿದ್ದರು. ಅವರ ಮೃತದೇಹಗಳ ಶೋಧಕ್ಕೆ ಅಗತ್ಯವಿರುವ ಎಲ್ಲ ತಾಂತ್ರಿಕ ಸಲಕರಣೆಗಳನ್ನು ಬಳಸಿಕೊಂಡು ಶೀಘ್ರ ಶವಗಳನ್ನು ಹೊರತೆಗೆಯುವಂತೆ ನಿರ್ದೇಶಿಸಲಾಗಿದೆ ಎಂದರು.
ಪಣಂಬೂರು ನುರಿತ ಈಜುಗಾರರ ಸಂಪರ್ಕ ಸಾಧಿಸಿ ಅವರನ್ನು ಶೀಘ್ರವೇ ಇಲ್ಲಿಗೆ ಕರೆಸಿಕೊಂಡು ಶವಗಳನ್ನು ಹೊರತೆಗೆಯುವ ಕಾರ್ಯಾಚರಣೆಗೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಅಗತ್ಯಬಿದ್ದರೆ ಕಾರವಾರದ ಸೀಬರ್ಡ್‌ನಲ್ಲಿರುವ ಮುಳುಗು ತಜ್ಞರು, ನುರಿತ ಈಜುಗಾರರನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದರು.





