ಅಧಿಕಾರಿಗಳ ನಿರ್ಲಕ್ಷಕ್ಕೆ ಬಗರ್‌ಹುಕುಂ ಕಾಯ್ದೆ ನನೆಗುದಿಗೆ ಸಚಿವ ಕಾಗೋಡು ತಿಮ್ಮಪ್ಪ

ಸಾಗರ, ನ.8: ಬಗರ್‌ಹುಕುಂ ರಾಜ್ಯದ ಪ್ರಮುಖ ಸಮಸ್ಯೆಯಾಗಿದ್ದು, 1990ರ ದಶಕದಲ್ಲಿ ಬಂಗಾರಪ್ಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಅಧಿಕಾರಿಗಳ ನಿರ್ಲಕ್ಯದಿಂದ ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಸೋಮವಾರ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಗರ-ಸೊರಬ ತಾಲೂಕು ಬಗರ್‌ಹುಕುಂ ಸಾಗುವಳಿದಾರರು ಮತ್ತು 94ಸಿ ಯೋಜನೆಯಡಿಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ 4ಲಕ್ಷ ಫಲಾನುಭವಿಗಳು ಬಗರ್‌ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿ, ಹಕ್ಕುಪತ್ರಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಪ್ರತಿವಾರ ಬಗರ್‌ಹುಕುಂ ಸಮಿತಿ ಸಭೆ ಸೇರಿ, ಹಕ್ಕುಪತ್ರ ಕೊಡುವ ಕುರಿತು ಚರ್ಚೆ ನಡೆಸಬೇಕು ಎಂದು ಸರಕಾರದ ಸುತ್ತೋಲೆಯಿದ್ದರೂ ಎಲ್ಲಿಯೂ ಬಗರ್‌ಹುಕುಂ ಸಮಿತಿ ಸಭೆ ನಡೆಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಭೂರಹಿತ ರೈತರು ಇರಬಾರದು ಎಂಬ ಉದ್ದೇಶದಿಂದ ನಾನು ಕಂದಾಯ ಸಚಿವನಾದ ಮೇಲೆ ಗೋಮಾಳ, ಕಾನು, ಸೊಪ್ಪಿನ ಬೆಟ್ಟದಲ್ಲಿ ಸಾಗುವಳಿ ಮಾಡುತ್ತಿದ್ದರೆ ಅವರಿಗೆ ಹಕ್ಕುಪತ್ರ ನೀಡಬಹುದು ಎಂದು ಕಾನೂನು ತಿದ್ದುಪಡಿ ಮಾಡಿ ಆದೇಶವನ್ನು ಹೊರಡಿಸಿದ್ದೇನೆ. ಆದರೆ, ಅಧಿಕಾರಿಗಳು ಈ ಆದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಪರಿಣಾಮ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದವರು ಅರಣ್ಯಹಕ್ಕು ಕಾಯ್ದೆಯಡಿ ಒಂದು ಸಾಕ್ಷಿಯನ್ನು ನೀಡಿದರೂ ಹಕ್ಕುಪತ್ರ ಪಡೆಯಬಹುದು ಎನ್ನುವ ಆದೇಶವನ್ನು ಹೊರಡಿಸಲಾಗಿದೆ. ಆದರೆ, ಇದು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳ ತಲೆಗೆ ಹೋಗಿಲ್ಲ ಎಂದು ಕಾಗೋಡು ಅಧಿಕಾರಿಗಳ ನಿರ್ಲಕ್ಷತೆಯನ್ನು ಪ್ರದರ್ಶಿಸಿದರು.
ಶಾಸಕ ಮಧು ಬಂಗಾರಪ್ಪ ಮಾತನಾಡಿ, ನಮ್ಮ ತಾಲೂಕು ವ್ಯಾಪ್ತಿಗೆ ಬರುವ ತಾಳಗುಪ್ಪ ಹೋಬಳಿಯಲ್ಲಿ ಬಗರ್‌ಹುಕುಂ ಸಾಗುವಳಿಗೆ ಸಂಬಂಧಪಟ್ಟಂತೆ ಸುಮಾರು 600 ಅರ್ಜಿಗಳಿದ್ದು, ಅವುಗಳಲ್ಲಿ 250ಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರವನ್ನು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪಅವರ ಸಹಕಾರದೊಂದಿಗೆ ನೀಡಲಾಗಿದೆ. ಉಳಿದವರಿಗೆ ಡಿಸೆಂಬರ್ ಅಂತ್ಯದೊಳಗೆ ಹಕ್ಕುಪತ್ರ ನೀಡಲಾಗುತ್ತದೆ. ಸೊರಬ ತಾಲೂಕಿನ ಇತರೆ ಹೋಬಳಿಗಳ ಬಗರ್‌ಹುಕುಂ ಫಲಾನುಭವಿಗಳಿಗೂ ಶೀಘ್ರದಲ್ಲಿ ಹಕ್ಕುಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಕೆ.ಎಚ್. ಪರಶುರಾಮ್, ಬಗರ್‌ಹುಕುಂ ಸಮಿತಿ ಸದಸ್ಯರಾದ ಎಸ್.ಲಿಂಗರಾಜ್, ಸರಸ್ವತಮ್ಮ, ಉಪವಿಭಾಗಾಧಿಕಾರಿ ಡಿ.ಎಂ.ಸತೀಶ ಕುಮಾರ್, ತಹಶೀಲ್ದಾರ್ ಎನ್.ಟಿ. ಧರ್ಮೋಜಿರಾವ್ ಉಪಸ್ಥಿತರಿದ್ದರು.
ಕೊಳೆಯುತ್ತಿವೆ 10 ಸಾವಿರ ಅರ್ಜಿಗಳು
ಸಾರ, ಹೊಸನಗರ ತಾಲೂಕಿನಲ್ಲಿ ಅರಣ್ಯಹಕ್ಕು ಕಾಯ್ದೆಯಡಿ ಮಂಜೂರಾತಿ ಕೋರಿ ಬಂದ ಸುಮಾರು 10ಸಾವಿರ ಅರ್ಜಿಗಳು ಕೊಳೆಯುತ್ತಿವೆೆ. ಕಾಯ್ದೆ ಜಾರಿಗೆ ಬಂದು 8ವರ್ಷ ಗಳಾದರೂ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಗೋಡು, ಡಿಸೆಂಬರ್ ಅಂತ್ಯದೊಳಗೆ ಅರ್ಜಿ ವಿಲೇವಾರಿ ಮಾಡದೆ ಇದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನನ್ನ ಜೀವನದಲ್ಲಿ ರೈತರಿಗೆ ಭೂಮಿಯನ್ನು ಕೊಡಿಸಿ, ರಾಜಕೀಯದಿಂದ ನಿವೃತ್ತನಾಗಬೇಕು ಎನ್ನುವ ಆಸೆಯನ್ನು ಇರಿಸಿಕೊಂಡಿದ್ದೇನೆ. ಅದಕ್ಕೆ ಅಧಿಕಾರಿಗಳು ಸಹಕಾರ ನೀಡಿ, ನನ್ನ ಕಾಲಿಗೆ ಯಾರೂ ಬೀಳಬೇಡಿ. ಹಕ್ಕುಪತ್ರವನ್ನು ನಿಮ್ಮ ಕೈಗೆ ಕೊಟ್ಟು ನಾನೇ ನಿಮ್ಮ ಕಾಲಿಗೆ ಬೀಳುತ್ತೇನೆ. ಕಾಗೋಡು ತಿಮ್ಮಪ್ಪ ರಾಜ್ಯ ಕಂದಾಯ ಸಚಿವ





