ಉದ್ಯೋಗ ಮೇಳದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ: ಜಿಲ್ಲಾಧಿಕಾರಿ ಎಸ್.ಎಸ್.ನಕುಲ್

ಕಾರವಾರ, ನ.8: ನವೆಂಬರ್ 12 ಮತ್ತು 13ರಂದು ಕಾರವಾರದಲ್ಲಿ ಆಯೋಜಿಸಲಾಗಿರುವ ಉದ್ಯೋಗ ಮೇಳವನ್ನು ಯಶಸ್ವಿಗೊಳಿಸಲು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದ್ದು, ಹಿರಿಯ ಅಧಿಕಾರಿಗಳ ನೇತೃತ್ವದ ತಂಡಗಳು ವಹಿಸಿಕೊಂಡಿರುವ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಹೇಳಿದರು.
ಮಂಗಳವಾರ ಉದ್ಯೋಗ ಮೇಳ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಎಲ್ಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಸಭೆಯಲ್ಲಿ ಅವರು ಮಾತನಾಡಿದರು. ಉದ್ಯೋಗ ಮೇಳಕ್ಕೆ ಆಗಮಿಸುವ ಕಂಪೆನಿಗಳ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳಿಗೆ ಈಗಾಗಲೇ ನಗರದ ವಿವಿಧ ಲಾಡ್ಜ್‌ಗಳಲ್ಲಿ ವಾಸ್ತವ್ಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅವರನ್ನು ಬರಮಾಡಿಕೊಂಡು ಆತಿಥ್ಯ ಒದಗಿಸಲು ತಂಡಗಳನ್ನು ರಚಿಸಲಾಗಿದೆ. ಇದೇ ರೀತಿ ಊಟದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಕಾರ್ಯಕ್ರಮ ನಡೆಯುವ ಮೆಡಿಕಲ್ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜು ಆವರಣ ಹಾಗೂ ಒಳ ಭಾಗದಲ್ಲಿ ಶುಚಿತ್ವವನ್ನು ಕಾಪಾಡುವುದು, ಉದ್ಯೋಗ ಮೇಳ ಸ್ಥಳದಲ್ಲಿ ಅಭ್ಯರ್ಥಿಗಳ ನಿರ್ವಹಣೆ, ಅಭ್ಯರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಮಾಹಿತಿ ಕೇಂದ್ರ ಇತ್ಯಾದಿಗಳ ಸಮರ್ಪಕ ನಿರ್ವಹಣೆಗೆ ತಂಡಗಳನ್ನು ರಚಿಸಲಾಗಿದೆ. ಎಲ್ಲ್ಲ ತಂಡಗಳು ಡಿ.11ರಂದು ಮಧ್ಯಾಹ್ನ 12ಗಂಟೆಗೆ ಮೆಡಿಕಲ್ ಕಾಲೇಜಿನಲ್ಲಿ ಸೇರಬೇಕು. ಅಲ್ಲಿ ಪ್ರತೀ ತಂಡದ ಸದಸ್ಯರು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು. ಉದ್ಯೋಗ ಮೇಳ ಆಯೋಜನೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೆಡಿಕಲ್ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜಿಗಳಲ್ಲಿ ಸಂದರ್ಶನ ಇತ್ಯಾದಿಗಳಿಗೆ ಕೊಠಡಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಇಂಟರ್‌ನೆಟ್, ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಡಿಸೆಂಬರ್ 12ರಂದು ಬೆಳಗ್ಗೆ 10:15ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ ಸಂದರ್ಶನ ಇತ್ಯಾದಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ್, ಪ್ರೊಬೆಷನರಿ ಐಎಎಸ್‌ಅಧಿಕಾರಿ ಫೌಝಿಯಾ ತರನ್ನಮ್, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಉದ್ಯೊಗ ಮೇಳ ನೋಡಲ್ ಅಧಿಕಾರಿ ಸದಾಶಿವಪ್ರಭು , ಕಾರವಾರ ಉಪ ವಿಭಾಗಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.





