ಆಯುರ್ವೇದಿಕ್ ಔಷಧಿಗಳಲ್ಲಿ ಗುಣಮಟ್ಟದ ಖಾತರಿ ಅಗತ್ಯ: ಸಚಿವ ಶ್ರೀಪಾದ ನಾಯಕ್

ಹೊಸದಿಲ್ಲಿ, ನ.8: ಸಾಂಪ್ರದಾಯಿಕ ಔಷಧಿಗಳು ಸಂಕೀರ್ಣ ಸೂತ್ರಗಳನ್ನು ಹೊಂದಿರುವ ಕಾರಣ ಇವನ್ನು ರೂಢಿಯಲ್ಲಿರುವ ಮಾನದಂಡದ ಪ್ರಕಾರ ವಿವರಿಸಲು ಸಾಧ್ಯವಿಲ್ಲ . ಆದರೆ ಇದೇ ವೇಳೆ ಇಂತಹ ಗಿಡಮೂಲಿಕೆ(ಆಯುರ್ವೇದಿಕ್) ಔಷಧಿಗಳ ಗುಣಮಟ್ಟದ ಬಗ್ಗೆ ಖಾತರಿ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ಆಯುಷ್ ಇಲಾಖೆಯ ಸಚಿವ ಶ್ರೀಪಾದ್ ಯಸ್ಸೋ ನಾಕ್ ಹೇಳಿದ್ದಾರೆ.
ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಗಿಡಮೂಲಿಕೆ ಔಷಧಗಳ ಅಂತಾರಾಷ್ಟ್ರೀಯ ನಿಯಂತ್ರಕ ಸಮಿತಿಯ 9ನೇ ವಾರ್ಷಿಕ ಮಹಾಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 19 ರಾಷ್ಟ್ರಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸುರಕ್ಷತೆಯ ನಿಟ್ಟಿನಲ್ಲಿ ಮತ್ತು ಈ ಔಷಧಿ ಬಳಸುವ ಗ್ರಾಹಕರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ಆಯುರ್ವೇದಿಕ್ ಔಷದಿಗಳ ಗುಣಮಟ್ಟದ ಖಾತರಿ ಅತ್ಯಗತ್ಯ ಎಂದ ಸಚಿವರು, ಇದೊಂದು ಸವಾಲಾಗಿದ್ದು ಸೂಕ್ತ ಕಾನೂನು ಜಾರಿಗೊಳಿಸುವ ಮೂಲಕ ಈ ಸವಾಲನ್ನು ನಿಭಾಯಿಸಲು ಸಾಧ್ಯ ಎಂದರು.
ಆಯುರ್ವೇದಿಕ್ ಔಷಧಿಗಳ ವೈಜ್ಞಾನಿಕ ತಳಹದಿ, ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಗಳ ಬಗ್ಗೆ ಹಲವು ಪ್ರಶ್ನೆಗಳಿವೆ. ರಾಸಾಯನಿಕ ಔಷಧಿಗಳ ರೀತಿ, ಆಯುರ್ವೇದಿಕ್ ಔಷಧಗಳನ್ನು ರೂಢಿಯಲ್ಲಿರುವ ಮಾನದಂಡದ ಪ್ರಕಾರ ವಿವರಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.
ಆಯುಷ್ ಇಲಾಖೆ ಈಚೆಗೆ ಪ್ರಸಾರ ಮಾಡಿದ್ದ ಜಾಹೀರಾತೊಂದರಲ್ಲಿ ಆಯುರ್ವೇದಿಕ್ ಔಷಧದಿಂದ ಡಯಾಬಿಟೀಸ್ ರೋಗ ಗುಣಪಡಿಸಬಹುದು ಎಂದು ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಅಕ್ಟೋಬರ್‌ನಲ್ಲಿ ಈ ಜಾಹೀರಾತಿನ ಪ್ರಸಾರವನ್ನು ಹಿಂಪಡೆಯಲಾಗಿತ್ತು.
ಆಯುರ್ವೇದ ವಿಜ್ಞಾನ ಸಂಶೋಧನೆಯ ಕೇಂದ್ರ ಸಮಿತಿ ಉತ್ಪಾದಿಸಿದ ಆಯುಷ್-82 ಎಂಬ ಔಷಧಿ ಡಯಾಬಿಟೀಸ್ ಗುಣಪಡಿಸುತ್ತದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ. ‘ದಿ ಡ್ರಗ್ಸ್ ಆ್ಯಂಡ್ ಮ್ಯಾಜಿಕ್ ರೆಮೆಡೀಸ್ ಅಬ್ಜೆಕ್ಷನೇಬಲ್ ಅಡ್ವರ್‌ಟೈಸ್‌ಮೆಂಟ್ ಆ್ಯಕ್ಟ್ 1954’ ರ ಪ್ರಕಾರ ಡಯಾಬಿಟೀಸ್‌ನಂತಹ ದೀರ್ಘಕಾಲಿಕ ರೋಗಗಳನ್ನು ಗುಣಪಡಿಸುವ ಕುರಿತು ಜಾಹೀರಾತು ನೀಡುವಂತಿಲ್ಲ. ಕಳೆದ ತಿಂಗಳಲ್ಲಿ ಕೇರಳ ರಾಜ್ಯ ಔಷಧ ನಿಯಂತ್ರಣ ಇಲಾಖೆಯು ಸುಮಾರು 20 ಲಕ್ಷ ಮೊತ್ತದ ಈ ಔಷಧಿಗಳನ್ನು ವಶಪಡಿಸಿಕೊಂಡಿತ್ತು.







