ಭತ್ತದ ಕಟಾವಿನಲ್ಲಿ ಸಂಭ್ರಮಿಸಿದ ನಿಟ್ಟೂರು ಶಾಲೆಯ ವಿದ್ಯಾರ್ಥಿಗಳು

ಉಡುಪಿ, ನ.8: ನಿಟ್ಟೂರು ಪ್ರೌಢಶಾಲೆಯ 10ನೆ ತರಗತಿಯ ಸುಮಾರು 76 ಮಂದಿ ವಿದ್ಯಾರ್ಥಿಗಳು ಶಾಲೆಯ ಸನಿಹದ ಕಕ್ಕುಂಜೆ ಬಯಲಿನಲ್ಲಿ ಜುಲೈ ತಿಂಗಳಲ್ಲಿ ತಾವೇ ನೆಟ್ಟ ಭತ್ತದ ಗದ್ದೆಯಲ್ಲಿ ಕಟಾವು ಮಾಡಿ ಸಂಭ್ರಮಿಸಿದರು.
ವಿದ್ಯಾರ್ಥಿಗಳಿಗೆ ಕೃಷಿಯ ಪ್ರಾಥಮಿಕ ಜ್ಞಾನ ನೀಡುವ ಉದ್ದೇಶದಿಂದ ನಿಟ್ಟೂರು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ನೇತೃತ್ವದಲ್ಲಿ ಅಧ್ಯಾಪಕರು ವಿಶೇಷ ಆಸಕ್ತಿಯಿಂದ ಕೃಷಿಯ ಪ್ರಾಯೋಗಿಕ ಅನುಭವಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿದ್ದರು. ವಿದ್ಯಾರ್ಥಿಗಳು ತಾವೇ ಕಟಾವು ಮಾಡಿದ ತೆನೆಭರಿತ ಭತ್ತದ ಕೆಯ್ ಹೊರೆಯನ್ನು ಹೊತ್ತು ಅಂಗಳಕ್ಕೆ ತಂದು ಮಂಚಕ್ಕೆ ಬಡಿದು ಸಂಭ್ರಮಿಸುತ್ತಾ ಭತ್ತವನ್ನು ಹುಲ್ಲಿನಿಂದ ಬೇರ್ಪಡಿಸಿದರು. ಈ ಮೂಲಕ ತಾವು ತಿನ್ನುವ ಒಂದೊಂದು ಅಗಳು ಅನ್ನದ ಹಿಂದಿರುವ ಶ್ರಮ, ಅನ್ನದಾತನ ಸಂಕಷ್ಟದ ನೇರ ಅನುಭವ ಪಡೆದರು.
ವಿದ್ಯಾರ್ಥಿಗಳ ಜೊತೆಯಲ್ಲಿ ಶಾಲಾ ಶಿಕ್ಷಕರು ಕೂಡ ಈ ಕಾರ್ಯದಲ್ಲಿ ಜೊತೆಯಾದರು. ಶಾಲಾ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರರ ವಿಶೇಷ ಆಸಕ್ತಿ ಹಾಗೂ ಪೋಷಕರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಕೃಷಿಯ ನೇರ ಅನುಭವ ಪಡೆಯಲು ಸಾಧ್ಯವಾಯಿತು.





