ಟಿಪ್ಪುಜಯಂತಿಗೆ 69 ಲಕ್ಷರೂ. ಬಿಡುಗಡೆ
ಬೆಂಗಳೂರು, ನ. 8: ಮೈಸೂರು ಹುಲಿ, ಹಝ್ರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ನ.10ರಂದು ಆಚರಣೆ ಮಾಡಲು ರಾಜ್ಯ ಸರಕಾರ 69 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಧಿಕೃತ ಆದೇಶವನ್ನು ಹೊರಡಿಸಿದೆ.
ರಾಜ್ಯ ಮಟ್ಟದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಸಮಾರಂಭಕ್ಕೆ 10 ಲಕ್ಷ ರೂ., 176 ತಾಲೂಕು ಕೇಂದ್ರಗಳಲ್ಲಿ ಆಚರಿಸಲು ಒಟ್ಟು 44 ಲಕ್ಷ ರೂ.ಹಾಗೂ 10 ಜಿಲ್ಲಾ ಕೇಂದ್ರ ಗಳಿಗೆ ಒಟ್ಟು 15 ಲಕ್ಷ ರೂ. ಸೇರಿದಂತೆ ಒಟ್ಟು 69 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ಜಿಲ್ಲಾ ಕೇಂದ್ರಗಳಿಗೆ 1.50 ಲಕ್ಷ ರೂ., 176 ತಾಲೂಕುಗಳಿಗೆ ತಲಾ 26 ಸಾವಿರ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಮಂಜೂರು ಮಾಡಿರುವ ಹಣವನ್ನು ನಿಗದಿತ ಉದ್ದೇಶಕ್ಕೆ ಬಳಸತಕ್ಕದ್ದು. ಮಂಜೂರು ಮಾಡಿದ ಹಣ ಸಮರ್ಪಕವಾಗಿ ಬಳಕೆಯಾದ ಬಗ್ಗೆ ಲೆಕ್ಕಪರಿಶೋಧಕರಿಂದ ದೃಢೀಕರಿಸಿದ ಲೆಕ್ಕಪಟ್ಟಿ ಹಾಗೂ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಲುವುದು ಎಂದು ನಿರ್ದೇಶಿಸಲಾಗಿದೆ.
ಶಾಂತಿ ಕಾಪಾಡುವಂತೆ ಪರಮೇಶ್ವರ್ ಮನವಿ
ಬೆಂಗಳೂರು, ನ.8: ರಾಜ್ಯ ಸರಕಾರವು ಕಳೆದ ವರ್ಷ ದಂತೆ ಈ ಬಾರಿಯೂ ಟಿಪ್ಪುಸುಲ್ತಾನ್ ಜಯಂತಿ ಆಚರಿಸಲು ಸಿದ್ಧವಾಗಿದೆ. ಜಯಂತಿ ವೇಳೆ ಶಾಂತಿ ಕಾಪಾಡುವಂತೆ ಬಿಜೆಪಿ ಹಾಗೂ ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಯಾವುದೇ ಬಗೆಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಾಭಾವಿಕವಾಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಕೈ ಹಾಕಿದರೆ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.







