ಅಮೆರಿಕ: ಭಾರೀ ಪ್ರಮಾಣದಲ್ಲಿ ಮತದಾನ
ನ್ಯೂಯಾರ್ಕ್, ನ. 8: ಅಮೆರಿಕದ 45ನೆ ಅಧ್ಯಕ್ಷರನ್ನು ಆರಿಸುವ ಮತದಾನ ದೇಶಾದ್ಯಂತ ಮಂಗಳವಾರ ಆರಂಭಗೊಂಡಿದೆ.
ಅಭ್ಯರ್ಥಿಗಳ ನಡತೆಯ ಬಗ್ಗೆಯೇ ಹೆಚ್ಚಾಗಿ ಕೇಂದ್ರೀಕರಣಗೊಂಡಿದ್ದ ತೀವ್ರ ಚುನಾವಣಾ ಪ್ರಚಾರ ಸೋಮವಾರ ರಾತ್ರಿ ಕೊನೆಗೊಂಡಿತು. ತಮ್ಮ ಪರವಾಗಿ ಮತಗಳನ್ನು ಹಾಕುವಂತೆ ಮತದಾರರಿಗೆ ಡೆಮಾಕ್ರಟಿಕ್ ಅಭ್ಯರ್ಥಿ 69 ವರ್ಷದ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಅಭ್ಯರ್ಥಿ 70 ವರ್ಷದ ಡೊನಾಲ್ಡ್ ಟ್ರಂಪ್ ಕೊನೆಯ ಕ್ಷಣಗಳ ಮನವಿಗಳನ್ನು ಮಾಡಿಕೊಂಡರು.
ರಾಯ್ಟರ್ಸ್/ಇಪ್ಸಾಸ್ ನಡೆಸಿರುವ ಸಮೀಕ್ಷೆಯ ಪ್ರಕಾರ, ಹಿಲರಿ ತನ್ನ ಎದುರಾಳಿ ಟ್ರಂಪ್‌ರನ್ನು ಸೋಲಿಸುವ ಸಾಧ್ಯತೆ 90 ಶೇಕಡ. ಚುನಾವಣೆ ಗೆಲ್ಲಲು 270 ಇಲೆಕ್ಟೋರಲ್ ಕಾಲೇಜು ಮತಗಳ ಆವಶ್ಯಕತೆಯಿದ್ದು, ಹಿಲರಿ 303 ಮತ್ತು ಟ್ರಂಪ್ 235 ಇಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆಯುವರು ಎಂದು ಸಮೀಕ್ಷೆ ತಿಳಿಸಿದೆ.
ಅಮೆರಿಕದ ಅತ್ಯಂತ ಜಿದ್ದಾಜಿದ್ದಿನ ಚುನಾವಣೆಗಳ ಪೈಕಿ ಒಂದಾಗಿರುವ ಚುನಾವಣೆಯ ಫಲಿತಾಂಶಕ್ಕಾಗಿ ಜಗತ್ತು ಬಿಟ್ಟ ಕಣ್ಣುಗಳಿಂದ ಕಾಯುತ್ತಿದೆ. ಹಿಲರಿ ಗೆಲ್ಲುತ್ತಾರೆ ಎಂಬ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಶೇರು ಮಾರುಕಟ್ಟೆಗಳಲ್ಲಿ ಏರಿಕೆ ಕಂಡುಬಂದಿದೆ.
ಹಿಲರಿ ಕ್ಲಿಂಟನ್ ಮತದಾನ: ಹಿಲರಿ ಕ್ಲಿಂಟನ್ ತನ್ನ ಊರು ನ್ಯೂಯಾರ್ಕ್‌ನ ಚಪ್ಪಕದ ಪ್ರಾಥಮಿಕ ಶಾಲೆಯೊಂದರಲ್ಲಿ ಮತ ಹಾಕಿದರು.
ಟ್ರಂಪ್ ಮ್ಯಾನ್‌ಹಟನ್‌ನಲ್ಲಿ ಬಳಿಕ ಮತ ಚಲಾಯಿಸಲಿದ್ದಾರೆ.
ಇದಕ್ಕೂ ಮೊದಲು ಸೋಮವಾರ ರಾತ್ರಿ ಅಭ್ಯರ್ಥಿಗಳಿಬ್ಬರೂ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ಪ್ರಮುಖ ರಾಜ್ಯಗಳಲ್ಲಿ ತುರುಸಿನ ಅಂತಿಮ ಕ್ಷಣಗಳ ಪ್ರಚಾರದಲ್ಲಿ ತೊಡಗಿಕೊಂಡರು.
ಫಿಲಡೆಲ್ಫಿಯದಲ್ಲಿ ಸುಮಾರು 33,000 ಬೆಂಬಲಿಗರ ಬೃಹತ್ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್, ‘‘ಆಶಾದಾಯಕ, ಸರ್ವರನ್ನೊಳಗೊಂಡ ಹಾಗೂ ವಿಶಾಲ ಹೃದಯದ ಅಮೆರಿಕದಲ್ಲಿ ನಾವು ನಂಬಿಕೆಯಿರಿಸಲು ಬಯಸುತ್ತೇವೆ’’ ಎಂದು ಹೇಳಿದರು.
ಈ ಸಭೆಯಲ್ಲಿ ದೇಶದ ಅಧ್ಯಕ್ಷ ಡೆಮಾಕ್ರಟಿಕ್ ಪಕ್ಷದವರೇ ಆದ ಬರಾಕ್ ಒಬಾಮ, ಅವರ ಪತ್ನಿ ಮಿಶೆಲ್ ಒಬಾಮ, ಹಿಲರಿಯ ಗಂಡ ಹಾಗೂ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮುಂತಾದವರು ಭಾಗವಹಿಸಿದರು.
ಇನ್ನೊಂದೆಡೆ, ನ್ಯೂಹ್ಯಾಂಪ್‌ಶಯರ್‌ನ ಮ್ಯಾಂಚೆಸ್ಟರ್‌ನಲ್ಲಿ ಸಂಜೆ ಟ್ರಂಪ್ ಪ್ರಚಾರ ಸಭೆಯೊಂದರಲ್ಲಿ ಭಾಗವಹಿಸಿದರು. ಈ ಸಭೆಯಲ್ಲಿ ಟ್ರಂಪ್‌ರ ಹೆಚ್ಚಿನ ಕುಟುಂಬ ಸದಸ್ಯರು ಮತ್ತು ಉಪಾಧ್ಯಕ್ಷ ಅಭ್ಯರ್ಥಿ ಮೈಕ್ ಪೆನ್ಸ್ ಪಾಲ್ಗೊಂಡರು.







