ಸುಪ್ರೀಂ ಕೋರ್ಟ್ ಪ್ರಶ್ನೆಗೆ ತಬ್ಬಿಬ್ಬಾದ ಅರ್ಜಿದಾರ
ಯೋಗ ಕಡ್ಡಾಯ ಕೋರಿ ಅರ್ಜಿ
ಹೊಸದಿಲ್ಲಿ, ನ.8: ಶಾಲೆಗಳಲ್ಲಿ ಯೋಗ ಕಲಿಕೆಯನ್ನು ಕಡ್ಡಾಯಗೊಳಿಸಬೇಕೆಂದು ಅಪೀಲು ಸಲ್ಲಿಸಿದ ವಕೀಲರೊಬ್ಬರ ಯೋಗ ಜ್ಞಾನವನ್ನು ಸುಪ್ರೀಂ ಕೋರ್ಟ್ ಪರೀಕ್ಷಿಸಲೆತ್ನಿಸಿದಾಗ ಆ ವಕೀಲರೇ ತಬ್ಬಿಬ್ಬಾದ ಘಟನೆ ನಡೆದಿದೆ.
‘‘ಯೋಗದಲ್ಲಿ ಕೊನೆಯ ಆಸನ ಯಾವುದು?’’ ಎಂದು ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಟಿ.ಎಸ್.ಠಾಕುರ್ ನೇತೃತ್ವದ ಪೀಠ ಆ ವಕೀಲರನ್ನು ಪ್ರಶ್ನಿಸಿದಾಗ ಅವರು ಉತ್ತರಿಸಲು ತಡವರಿಸಿದರು. ಕೊನೆಗೆ ಸುಪ್ರೀಂ ಕೋರ್ಟ್ ತನ್ನ ಪ್ರಶ್ನೆಗೆ ತಾನೇ ಉತ್ತರ ನೀಡಿ ಅದು ಶವಾಸನ ಎಂದು ಹೇಳಿತಲ್ಲದೆ ‘‘ನೀವು ಯೋಗದ ಇಷ್ಟೊಂದು ಬೆಂಬಲಿಗರಾಗಿರುವ ಹೊರತಾಗಿಯೂ ನಿಮಗೆ ಇದು ಗೊತ್ತಿಲ್ಲವೇಕೆ?’’ ಎಂದು ಪ್ರಶ್ನಿಸಿತು.
ರಾಷ್ಟ್ರೀಯ ಯೋಗ ನೀತಿಯನ್ನು ರಚಿಸುವಂತೆ ಹಾಗೂ ಶಾಲೆಗಳಲ್ಲಿ ಒಂದರಿಂದ 8ನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಯೋಗ ಕಡ್ಡಾಯಗೊಳಿಸುವಂತೆ ಕೋರಿ ಅವರು ಸಲ್ಲಿಸಿರುವ ಅಪೀಲನ್ನು ಹಿಂದಕ್ಕೆ ಪಡೆಯಲು ಹಾಗೂ ಈ ಬಗೆಗಿನ ಬಾಕಿ ಪ್ರಕರಣವೊಂದರಲ್ಲಿ ಅರ್ಜಿದಾರರಲ್ಲೊಬ್ಬರಾಗಿ ಪ್ರವೇಶಿಸುವಂತೆ ಅವರಿಗೆ ಜಸ್ಟಿಸ್ ಡಿ.ವೈ.ಚಂದ್ರಚೂಡ್ ಹಾಗೂ ಜಸ್ಟಿಸ್ ಎಲ್.ನಾಗೇಶ್ವರ ರಾವ್ ಅವರನ್ನೊಳಗೊಂಡ ಪೀಠ ಹೇಳಿತು.
ಈ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದಾಖಲಿಸಿದ ದಿಲ್ಲಿ ಬಿಜೆಪಿ ವಕ್ತಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲರಾದ ಎಂ.ಎನ್.ಕೃಷ್ಣಮಣಿ ತಮ್ಮ ಅಪೀಲಿನ ವಿಚಾರದಲ್ಲಿ ಸಂಬಂಧಿತರಿಗೆ ನೊಟೀಸ್ ಜಾರಿಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
‘‘ನಾನು ಯೋಗ ಅಭ್ಯಸಿಸುತ್ತಿಲ್ಲವೆಂಬುದು ಈ ಉತ್ತಮ ಕಾರ್ಯಕ್ಕೆ ಅಡ್ಡಿಯಾಗಬಾರದು’’ ಎಂದು ಅವರು ಹೇಳಿದರು. ‘‘ನ್ಯಾಯಾಲಯ ಯಾರ ಮೇಲೂ ಯೋಗ ಹೇರುವಂತಿಲ್ಲ. ಯೋಗ ಅಭ್ಯಸಿಸುವಂತೆ ಜನರ ಮನವೊಲಿಸಬಹುದು. ಆದರೆ ಈ ಬಗ್ಗೆ ಪಠ್ಯ ರಚಿಸುವ ಹಾಗಿಲ್ಲ’’ ಎಂದು ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯ ಪಟ್ಟಿತು. ಶಾಲಾ ಪಠ್ಯದಲ್ಲಿ ಏನನ್ನು ಸೇರಿಸಬೇಕು ಎಂದು ನಿರ್ಧರಿಸುವುದು ಸರಕಾರ ಹಾಗೂ ಶೈಕ್ಷಣಿಕ ತಜ್ಞರಿಗೆ ಬಿಟ್ಟ ವಿಚಾರ’’ ಎಂದೂ ಕೋರ್ಟ್ ಹೇಳಿತು.
ಇಂತಹುದೇ ಇನ್ನೊಂದು ಪ್ರಕರಣವನ್ನು ಜಸ್ಟಿಸ್ ಎಂ.ಬಿ.ಲೋಕೂರು ವಿಚಾರಣೆ ನಡೆಸುತ್ತಿದ್ದು ಈ ಪ್ರಕರಣದಲ್ಲಿ ಇಂಟರ್ ಲೊಕ್ಯುಟರಿ ಅಪ್ಲಿಕೇಶನ್ ಸಲ್ಲಿಸುವಂತೆ ಅಂತಿಮವಾಗಿ ಹೇಳಿದ ನ್ಯಾಯಾಲಯ ತಾನು ಈ ಪ್ರಕರಣದ ವಿಚಾರಣೆಯನ್ನು ನವೆಂಬರ್ 29ಕ್ಕೆ ಕೈಗೆತ್ತಿಕೊಳ್ಳುವುದಾಗಿ ಹೇಳಿತು.
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ಎನ್‌ಸಿಇಆರ್‌ಟಿ ಹಾಗೂ ಸಿಬಿಎಸ್‌ಸಿ ಸಂಸ್ಥೆಗಳಿಗೆ ಯೋಗದ ಹಾಗೂ ಆರೋಗ್ಯ ಶಿಕ್ಷಣದ ಬಗೆ ಪಠ್ಯ ಸಿದ್ಧಪಡಿಸುವಂತೆ ಆದೇಶಿಸಬೇಕೆಂದು ಈ ಹಿಂದೆ ಉಪಾಧ್ಯಾಯ ತಮ್ಮ ಅಪೀಲಿನಲ್ಲಿ ಮನವಿ ಸಲ್ಲಿಸಿದ್ದರು.





