ದೇಶದೆಲ್ಲೆಡೆ ‘ಚಿಲ್ಲರೆ’ಜಗಳ, ಪರದಾಟ
500,1000 ನೋಟುಗಳ ಮುದ್ರಣ ಬಂದ್ ಎಫೆಕ್ಟ್

ಬೆಂಗಳೂರು, ನ.9: ಕೇಂದ್ರ ಸರಕಾರ ಮಧ್ಯರಾತ್ರಿಯಿಂದಲೇ 500 ಹಾಗೂ ಸಾವಿರ ಮುಖಬೆಲೆಯ ಕರೆನ್ಸಿ ನೋಟುಗಳ ಮುದ್ರಣವನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಚಿಲ್ಲರೆಗಾಗಿ ಜಗಳ, ಪರದಾಟ ಆರಂಭವಾಗಿದೆ.
ಪೆಟ್ರೋಲ್ ಪಂಪ್, ಟೋಲ್ ಗೇಟ್, ಬಸ್ಸುಗಳ ನಿರ್ವಾಹಕರು, ಮಾರುಕಟ್ಟೆಗಳು ಸಹಿತ ದೇಶದ ವಿವಿಧಡೆ 500 ಹಾಗೂ 1000 ರೂ. ನೋಟುಗಳಿಗೆ ಚಿಲ್ಲರೆ ನೀಡುತ್ತಿಲ್ಲ. ಇನ್ನೂ ಕೆಲವೆಡೆ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸುತ್ತಿಲ್ಲ.
ಬೆಂಗಳೂರಿನ ಹೊಸೂರು ರಸ್ತೆಯಲ್ಲಿನ ಅತ್ತಿಬೆಲೆ ಟೋಲ್‌ಗೇಟ್‌ನಲ್ಲಿ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಚಿಲ್ಲರೆ ವಿಚಾರಕ್ಕೆ ಸಂಬಂಧಿಸಿ ವಾಗ್ವಾದ ನಡೆದಿದೆ. ಸಾರ್ವಜನಿಕರಿಗೆ ಚಿಲ್ಲರೆ ಕಾಸು ನೀಡಲು ಸಾಧ್ಯವಾಗದೇ ಪರದಾಟ ನಡೆಸುತ್ತಿದ್ದಾರೆ.
ಬೆಳಗಾವಿಯಲ್ಲಿ ಬಸ್‌ನ ಸಿಬ್ಬಂದಿ-ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ಜಗಳವಾಗಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲೂ ಚಿಲ್ಲರೆ ಸಮಸ್ಯೆಯಿಂದಾಗಿ ವ್ಯಾಪಾರಿಗಳು ಪರದಾಟ ನಡೆಸುತ್ತಿದ್ದಾರೆ.
ಟೋಲ್‌ಗೇಟ್ ಸಿಬ್ಬಂದಿ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣದಿಂದ ಕಿ.ಲೋ. ದೂರದ ತನಕ ವಾಹನಗಳು ಕ್ಯೂನಲ್ಲಿ ನಿಂತಿವೆ ಎಂದು ವರದಿಯಾಗಿದೆ.





