500, 1000 ರೂ. ನೋಟುಗಳು ಮತ್ತೆ ಚಲಾವಣೆಗೆ ಬರಲಿವೆಯೇ ?

500, 1000 ರೂ. ನೋಟುಗಳು ಮತ್ತೆ ಚಲಾವಣೆಗೆ ಬರಲಿವೆಯೇ ?
ಹೊಸದಿಲ್ಲಿ, ನ.9: ಐನೂರು ಹಾಗೂ ಒಂದು ಸಾವಿರ ರೂಪಾಯಿಗಳ ನೋಟುಗಳನ್ನು ಕೇಂದ್ರ ಸರಕಾರ ಚಲಾವಣೆಯಿಂದ ಹಿಂದೆಗೆದುಕೊಳ್ಳುವುದಾಗಿ ಮಂಗಳವಾರ ಪ್ರಕಟಿಸಿರುವುದು ಬಹಳಷ್ಟು ಆಶ್ಚರ್ಯ ಹುಟ್ಟಿಸುವಂತಹದ್ದಾಗಿದ್ದರೂ, ಇಂತಹ ಒಂದು ಕ್ರಮ ಭಾರತದಲ್ಲಿ ಇದೇ ಮೊದಲಲ್ಲ. ಫೋರ್ಜರಿ ಹಾಗೂ ಕಪ್ಪುಹಣ ಚಲಾವಣೆ ತಡೆಗಟ್ಟಲು ಸರಕಾರ ಇಂತಹ ಒಂದು ಕ್ರಮವನ್ನು ಕೊನೆಯ ಅಸ್ತ್ರವಾಗಿ ಬಳಸುತ್ತದೆ. ಭಾರತದ ಇತಿಹಾಸದಲ್ಲಿ ಕನಿಷ್ಠ ಎರಡು ಬಾರಿ ಈ ಹಿಂದೆ ಇಂತಹ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಕಪ್ಪುಹಣವನ್ನು ಗುರಿಯಾಗಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಜನವರಿ 1946ರಲ್ಲಿ ರೂ.1,000 ಹಾಗೂ ರೂ.10,000 ಕರೆನ್ಸಿ ನೋಟುಗಳನ್ನು ಹಿಂಪಡೆಯಲಾಗಿದ್ದ. 1956 ರಲ್ಲಿ ರೂ 1000, ರೂ 5000 ಹಾಗೂ ರೂ 10,000 ಮೌಲ್ಯದ ನೋಟುಗಳನ್ನು ಮತ್ತೆ ಚಲಾವಣೆಗೆ ತರಲಾಯಿತಾದರೂ ಜನವರಿ 1978ರಲ್ಲಿ ಅವುಗಳನ್ನು ಮತ್ತೆ ರದ್ದುಪಡಿಸಲಾಗಿತ್ತು. ಆಗ ಜನತಾ ಪಾರ್ಟಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿತ್ತು ಹಾಗೂ ಮೇಲೆ ತಿಳಿಸಿದ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿತ್ತು. ಈ ಪ್ರಕ್ರಿಯೆಯನ್ನ ಆರ್ ಬಿಐ ಇತಿಹಾಸ (ಮೂರನೇ ಸಂಚಿಕೆ) ಇದರಲ್ಲಿ ವಿವರಿಸಲಾಗಿದೆ.
ಜನವರಿ 14, 1978ರಲ್ಲಿ ಆರ್ ಬಿಐ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಯಾಗಿದ್ದ ಆರ್.ಜಾನಕಿ ರಾಮನ್ ಅವರಿಗೆ ದಿಲ್ಲಿಗೆ ಹೋಗಿ ಕೆಲ ಪ್ರಮುಖ ವಿಚಾರಗಳನ್ನು ಚರ್ಚಿಸಲು ಹೇಳಲಾಗಿತ್ತು. ದಿಲ್ಲಿಗೆ ತಲುಪಿದಾಗ ರಾಮನ್ ಅವರಿಗೆ ದೊಡ್ಡ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ನಿರ್ಧಾರದ ಬಗ್ಗೆ ತಿಳಿಸಲಾಗಿತ್ತು ಹಾಗೂ ಒಂದು ದಿನದೊಳಗೆ ಕರಡು ಅಧಿಸೂಚನೆಯನ್ನು ಸಿದ್ಧಪಡಿಸಲು ಹೇಳಲಾಗಿತ್ತು.
ಮುಂಬೈಯ್ಯಲ್ಲಿರುವ ರಿಸರ್ವ್ ಬ್ಯಾಂಕಿನ ಕೇಂದ್ರ ಕಚೇರಿಯೊಂದಿಗೆ ಯಾವುದೇ ರೀತಿಯ ಸಂವಹನವನ್ನು ನಡೆಸಲು ಬಿಡಲಾಗಿರಲಿಲ್ಲ. ಕರಡು ಅಧಿಸೂಚನೆ ತಯಾರುಗೊಂಡ ಬಳಿಕ ಅದನ್ನು ಆಗಿನ ರಾಷ್ಟ್ರಪತಿ ಎನ್.ಸಂಜೀವ ರೆಡ್ಡಿಯವರ ಅಂಕಿತಕ್ಕಾಗಿ ಜನವರಿ 16ರಂದು ಕಳುಹಿಸಲಾಯಿತು. ಅದೇ ದಿನ ಬೆಳಿಗ್ಗೆ 9 ಗಂಟೆಗೆ ಈ ಬಗೆಗಿನ ಸುದ್ದಿಯನ್ನು ಆಲ್ ಇಂಡಿಯಾ ರೇಡಿಯೋದಲ್ಲಿ ಘೋಷಿಸಲಾಯಿತು. ಜನವರಿ 17ರಂದು ಎಲ್ಲಾ ಬ್ಯಾಂಕುಗಳು ಹಾಗೂ ಟ್ರೆಶರಿಗಳು ಮುಚ್ಚಲಾಗುವುದೆಂದು ಹೇಳಲಾಯಿತು.
ಆದರೆ ಅಂದಿನ ಆರ್ ಬಿಐ ಗವರ್ನರ್ ಐ.ಜಿ.ಪಟೇಲ್ ಈ ಪ್ರಕ್ರಿಯೆಯ ಪರವಾಗಿರಲಿಲ್ಲ. ಆಗಿನ ವಿತ್ತ ಸಚಿವ ಎಚ್.ಎಂ.ಪಟೇಲ್ ತಮಗೆ ಈ ವಿಚಾರ ತಿಳಿಸಿದಾಗ ತಾನು ಅವರಿಗೆ ಇಂತಹ ಪ್ರಕ್ರಿಯೆಗಳು ಉತ್ತಮ ಫಲಿತಾಂಶ ನೀಡದು ಎಂದು ಮನದಟ್ಟು ಮಾಡಿದ್ದೆ ಎಂದು ಪಟೇಲ್ ತಮ್ಮ ಕೃತಿ ‘ಗ್ಲಿಂಪ್ಸಸ್ ಆಫ್ ಇಂಡಿಯನ್ ಇಕನಾಮಿಕ್ ಪಾಲಿಸಿ-ಎನ್ ಇನ್ಸೈಡರ್ಸ್ ವೀವ್’ ನಲ್ಲಿ ಬರೆದಿದ್ದಾರೆ.
ಕಪ್ಪುಹಣವಿರುವವರು ಅದನ್ನು ನಗದು ರೂಪದಲ್ಲಿ ಹೆಚ್ಚು ಕಾಲ ಇಡುವುದಿಲ್ಲವೆಂಬುದು ಪಟೇಲ್ ಅಭಿಪ್ರಾಯವಾಗಿದೆ.
ಕಪ್ಪುಹಣದ ರಾಶಿಯನ್ನು ಸೂಟ್ ಕೇಸುಗಳಲ್ಲಿ ಅಥವಾ ತಲೆದಿಂಬುಗಳಲ್ಲಿ ತುಂಬಿಸಿಡಲಾಗುತ್ತದೆ ಎಂಬ ಭಾವನೆ ಹಳೆಯದು ಎಂದು ಅವರು ಹೇಳಿದ್ದರು. ಸಣ್ಣ ಪ್ರಮಾಣದ 500 ಹಾಗೂ 1,000 ಮುಖಬೆಲೆಯ ನೋಟುಗಳನ್ನು ವಿನಿಮಯಗೊಳಿಸಲು ಅವಕಾಶ ನೀಡಿರುವುದರಿಂದ ಕಪ್ಪುಹಣ ಹೊಂದಿರುವವರು ತಮ್ಮ ಏಜಂಟರ ಮುಖಾಂತರ ತಮ್ಮ ಕಾರ್ಯ ಸಾಧಿಸಿಕೊಳ್ಳಬಹುದು ಎಂದು ಪಟೇಲ್ ಹೇಳುತ್ತಾರೆ.
ಇತಿಹಾಸ ಮರುಕಳಿಸುವುದು ಎಂಬುದು ನಿಜವಾದರೆ 500 ಹಾಗೂ 1,000 ಮುಖಬೆಲೆಯ ನೋಟುಗಳು ಮತ್ತೆ ಚಲಾವಣೆಗೆ ಬರಬಹುದು.





