ಕೆಂಪೇಗೌಡ ಬಡಾವಣೆಯಲ್ಲಿ ಜನವರಿಯಲ್ಲಿ ನಿವೇಶನ ಹಂಚಿಕೆ ಪತ್ರ: ಸಿಎಂ

ಬೆಂಗಳೂರು, ನ.9: ಬಿಡಿಎ ಅಭಿವೃದ್ಧಿಪಡಿಸುತ್ತಿರುವ ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಹಂತದಲ್ಲಿ ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದ್ದು, ನಿವೇಶನದಾರರಿಗೆ ಜನವರಿಯಲ್ಲಿ ಹಂಚಿಕೆ ಪತ್ರ ವಿತರಿಸಲಾಗುವುದು. ಆ ಬಳಿಕ ಅಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಂಚಿಕೆಯಾಗಿರುವ ನಿವೇಶನಗಳಿಗೆ ಪಾರದರ್ಶಕವಾಗಿ ಸಂಖ್ಯೆಯನ್ನು ಕಂಪ್ಯೂಟರೀಕೃತ ವಿಧಾನದ ಮೂಲಕ ನಿಗದಿಪಡಿಸುವ ಪ್ರಕ್ರಿಯೆಗೆ ಗೃಹಕಚೇರಿ ಕೃಷ್ಣಾದಲ್ಲಿ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೆಂಪೇಗೌಡ ಬಡಾವಣೆಯಲ್ಲಿ 60:40 ಅನುಪಾತ ಪ್ರಕಾರ 2,174 ನಿವೇಶನಗಳನ್ನು ರೈತರಿಗೆ ಪರಿಹಾರದ ರೂಪದಲ್ಲಿ ಹಂಚಿಕೆ ಮಾಡಲಾಗಿದೆ. 20x30 ಅಳತೆಯ 1,500, 30x40 ಅಳತೆಯ ಎರಡು ಸಾವಿರ, 40x60 ಅಳತೆಯ ಒಂದು ಸಾವಿರ ಮತ್ತು 50x80 ಅಳತೆಯ 500 ಸೇರಿದಂತೆ ಒಟ್ಟು ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದವರು ವಿವರಿಸಿದರು.
20x30 ಅಳತೆಯ ನಿವೇಶನ ಮೌಲ್ಯ ಸಾಮಾನ್ಯ ವರ್ಗದವರಿಗೆ 10,46,251 ರೂ. ನಿಗದಿ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದಿರುವವರಿಗೆ 5,23,126 ರೂ., 30್ಡ40 ಅಳತೆಯ ನಿವೇಶನಕ್ಕೆ 23,25,002, 40x60 ಅಳತೆಯ ನಿವೇಶನಕ್ಕೆ 52,31,255 ಹಾಗೂ 50x80 ವಿಸ್ತೀರ್ಣದ ನಿವೇಶನಕ್ಕೆ 96,87,510 ರೂ.ನ್ನು ನಿಗದಿ ಮಾಡಲಾಗಿದೆ. ಕೆಂಪೇಗೌಡ ಬಡಾವಣೆಯಲ್ಲಿ 21 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಮೊದಲ ಹಂತದಲ್ಲಿ ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಜನವರಿಯಲ್ಲಿ ಮತ್ತೆ ಐದು ಸಾವಿರ ನಿವೇಶನಗಳನ್ನು ವಿತರಿಸಲಾಗುವುದು. ಜೇಷ್ಠತಾ ಆಧಾರದ ಮೇಲೆ ಇಂದು ನಿವೇಶನಗಳ ಸಂಖ್ಯೆ ನಿಗದಿ ಮಾಡಲಾಗಿದೆ. ಪಾರದರ್ಶಕವಾಗಿರಬೇಕು ಎಂಬ ಕಾರಣಕ್ಕೆ ಕಂಪ್ಯೂಟರೇಶನ್ ಮೂಲಕ ಈ ಪ್ರಕ್ರಿಯೆ ನೆರವೇರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ನಿವೇಶನ ಹಂಚುವ ಕೆಲಸ ಬಹು ದಿನಗಳಿಂದ ನನೆಗುದಿಗೆ ಬಿದ್ದಿತ್ತು. ಈಗ ಆ ಕೆಲಸ ನೆರವೇರಿದೆ. ಅರ್ಜಿ ಸಲ್ಲಿಸಿ ನಿವೇಶನ ಸಿಗದವರಿಗೆ ಹಣ ವಾಪಸ್ ನೀಡಲಾಗುವುದು ಎಂದು ತಿಳಿಸಿದರು.
ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ 2,408 ಕೋ.ರೂ. ವೆಚ್ಚವಾಗಲಿದೆ. ಇದಕ್ಕಾಗಿ 4,043 ಎಕರೆ 23 ಗುಂಟೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಇದರಲ್ಲಿ 2,223 ಎಕರೆ ವಸತಿ ಬಡಾವಣೆಗೆ, 1,723 ಎಕರೆ ನಿವೇಶನಗಳಿಗೆ, 500 ಎಕರೆ ಎತ್ತರದ ಕಟ್ಟಡಗಳಿಗೆ, ಉದ್ಯಾನಕ್ಕೆ 600, ನಾಗರಿಕ ಸೌಲಭ್ಯ ವಿಸ್ತೀರ್ಣಕ್ಕೆ 404 ಎಕರೆ ಮೀಸಲಿಡಲಾಗಿದೆ ಎಂದು ವಿವರಿಸಿದರು.
ಬಡಾವಣೆ ಮೂಲಕ ಸಂಗ್ರಹವಾಗುವ ಹಣವನ್ನು ಉಕ್ಕು ಸೇತುವೆ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಉತ್ತರಿಸಿದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಡಿಎ ನೂತನ ಅಧ್ಯಕ್ಷ ವೆಂಕಟೇಶ್, ಆಯುಕ್ತ ರಾಜಕುಮಾರ್‌ಖತ್ರಿ, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಶಾಸಕರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







