ಟೆಸ್ಟ್ ಇನಿಂಗ್ಸ್ ಆರಂಭಿಸಿದ ಕಿರಿಯ ಆಟಗಾರ ಹಮೀದ್

ರಾಜ್‌ಕೋಟ್, ನ.9: ಲಂಕಾಶೈರ್‌ನ ಬಲಗೈ ಬ್ಯಾಟ್ಸ್‌ಮನ್ ಹಸೀಬ್ ಹಮೀದ್ ಇಂಗ್ಲೆಂಡ್‌ನ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಇನಿಂಗ್ಸ್ ಆರಂಭಿಸಿದ ಪ್ರಥಮ ಕಿರಿಯ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ಆರಂಭವಾದ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹಮೀದ್ ಈ ಗೌರವಕ್ಕೆ ಪಾತ್ರರಾದರು. 19ರ ಹರೆಯದ ಹಮೀದ್ ತನ್ನ ತಂಡದ ನಾಯಕ ಅಲೆಸ್ಟೈರ್ ಕುಕ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಅಪೂರ್ವ ಅವಕಾಶ ಪಡೆದಿದ್ದರು.
ಕುಕ್ ಹಾಗೂ ಹಮೀದ್ ಮೊದಲ ವಿಕೆಟ್ ಜೊತೆಯಾಟದಲ್ಲಿ 47 ರನ್ ಸೇರಿಸಿದರು. ನಾಯಕ ಕುಕ್ 21 ರನ್‌ಗೆ ರವೀಂದ್ರ ಜಡೇಜಗೆ ಔಟಾದರು. ಚೊಚ್ಚಲ ಪಂದ್ಯದಲ್ಲಿ 82 ಎಸೆತಗಳನ್ನು ಎದುರಿಸಿದ್ದ ಹಮೀದ್ 6 ಬೌಂಡರಿಗಳನ್ನು ಒಳಗೊಂಡ 31 ರನ್ ಗಳಿಸಿ ಭಾರತದ ಸ್ಟಾರ್ ಸ್ಪಿನ್ನರ್ ಆರ್.ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.
ಲಂಕಾಶೈರ್ ಪರ 20 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 1,455 ರನ್ ಗಳಿಸಿರುವ ಹಮೀದ್ 4 ಶತಕ, 50 ಅರ್ಧಶತಕ ಬಾರಿಸಿದ್ದರು. ಮೈಕಲ್ ಅಥರ್ಟನ್ ಬಳಿಕ ಇಂಗ್ಲೆಂಡ್‌ನ ಪರವಾಗಿ ಇನಿಂಗ್ಸ್ ಆರಂಭಿಸಿದ ಲಂಕಾಶೈರ್‌ನ ಎರಡನೆ ಆಟಗಾರ ಹಮೀದ್.
ಲಂಕಾಶೈರ್‌ನ ಬೋಲ್ಟನ್‌ನಲ್ಲಿ 1997ರ ಜನವರಿ 17 ರಂದು ಜನಿಸಿದ್ದ ಹಮೀದ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದರು. ತಂಡದ ಕೆಲವು ಪ್ರಮುಖ ಆಟಗಾರರು ಕಳಪೆ ಫಾರ್ಮ್‌ನಲ್ಲಿದ್ದ ಕಾರಣ ಇಂಗ್ಲೆಂಡ್‌ನ ಪರ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದಿದ್ದರು.







