ಒಟ್ಟು ಎಷ್ಟು 500 ಹಾಗೂ 1000 ರೂ. ನೋಟುಗಳು ಚಲಾವಣೆಯಲ್ಲಿದ್ದವು ಗೊತ್ತೇ ?

ಹೊಸದಿಲ್ಲಿ,ನ. 9: ಸರಕಾರ 500 ಹಾಗೂ 1000 ರೂ. ನೋಟುಗಳ ಚಲಾವಣೆಯನ್ನು ಸ್ಥಗಿತಗೊಳಿಸಿರುವುದರಿಂದ ಆಗುವ ಪರಿಣಾಮ ಊಹಿಸಲಸಾಧ್ಯ. ಒಟ್ಟು 17,000 ಲಕ್ಷ ಕೋಟಿ ಮೌಲ್ಯದ ನೋಟುಗಳು ಭಾರತದಲ್ಲಿ ಸದ್ಯ ಚಲಾವಣೆಯಾಗುತ್ತಿದ್ದು ಇವುಗಳಲ್ಲಿ ಶೇ 80 ರಷ್ಟು 500 ಹಾಗೂ 1000 ರೂ ನೋಟುಗಳಾಗಿರುವುದರಿಂದ ಬ್ಯಾಂಕುಗಳು ರೂ 13.6 ಲಕ್ಷ ಕೋಟಿ ಮೌಲ್ಯದ ಕರೆನ್ಸಿಗಳನ್ನು ಹಿಂದಕ್ಕೆ ಪಡೆಯಬೇಕಾಗುತ್ತದೆ.
ಇಷ್ಟೊಂದು ದೊಡ್ಡ ಮೌಲ್ಯದ 500 ಹಾಗೂ 1000 ಕರೆನ್ಸಿ ನೋಟುಗಳ ಪ್ರವಾಹವನ್ನು ಹೇಗೆ ನಿಭಾಯಿಸುವುದೆಂಬುದೇ ಬ್ಯಾಂಕುಗಳಿಗೆ ದೊಡ್ಡ ತಲೆನೋವಿನ ಸಂಗತಿಯಾಗಿ ಬಿಟ್ಟಿದೆ. ಹಲವು ಬ್ಯಾಂಕುಗಳು ಈಗಾಗಲೇ ನೋಟು ಲೆಕ್ಕ ಮಾಡುವ ಮೆಶಿನುಗಳಿಗೆ ಆರ್ಡರ್ ಮಾಡಿವೆ. ಎಸ್ ಬಿ ಐ ಈಗಾಗಲೇ ತನ್ನ ದೊಡ್ಡ ಸಂಖ್ಯೆಯ ಕ್ಯಾಶ್ ಡೆಪಾಸಿಟ್ ಮೆಶಿನುಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ಉಪಯೋಗಿಸಲು ನಿರ್ಧರಿಸಿದೆ.
ದಿನವೊಂದಕ್ಕೆ 150 ಕ್ಕೂ ಕಡಿಮೆ ಜನರು ಉಪಯೋಗಿಸುವ ಎ ಟಿ ಎಂ ಕೇಂದ್ರಗಳಿಗೂ ಜನರು ಕ್ಯೂ ನಿಲ್ಲುವ ಸಾಧ್ಯತೆಯಿದೆ ದೇಶದಲ್ಲಿ 2.15 ಲಕ್ಷ ಎ ಟಿ ಎಂ ಗಳಿದ್ದರೆ, ಇಲ್ಲಿಗೆ ನಗದು ಸಾಗಿಸಬೇಕಾದ ಶಸ್ತ್ರಸಜ್ಜಿತ ಗಾರ್ಡ್ ಗಳಿರುವ ವ್ಯಾನುಗಳ ಸಂಖ್ಯೆ 10,000 ಕ್ಕೂ ಕಡಿಮೆಯಿದೆ. ಇದರಿಂದಾಗಿ ಎ ಟಿ ಎಂ ಗಳಿಗೆ ಹಣ ತುಂಬಿಸುವುದು ಸವಾಲಿನ ಕೆಲಸವಾಗಲಿದೆ. ಮೇಲಾಗಿ ಈಗ ಕೇವಲ 100 ಹಾಗೂ 50 ರೂ ನೋಟುಗಳನ್ನು ಎಟಿಎಂ ಗಳಿಗೆ ತುಂಬಿಸಬೇಕಾಗುವುದರಿಂದ ಈ ನೋಟುಗಳಿಗೆ ಎ ಟಿ ಎಂ ಮೆಶಿನುಗಳಲ್ಲಿ ಅಧಿಕ ಜಾಗದ ಅಗತ್ಯವೂ ಇದೆ.
ಐಸಿಐಸಿಐ, ಎಚ್ ಡಿ ಎಫ್ ಸಿ ಹಾಗೂ ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳ ಪ್ರಕಾರ ಅವರು ತಮ್ಮ ಎ ಟಿ ಎಂ ನೆಟ್ ವರ್ಕನ್ನು ಇಂದು ರಾತ್ರಿ 11.55 ಕ್ಕೆ ಫ್ರೀರ್ ಮಾಡಲಿದ್ದಾರೆ. ಎ ಟಿ ಎಂ ಗಳಿಗೆ ನಗದು ಲೋಡ್ ಮಾಡುವ ಕ್ಯಾಶ್ ಫಿಲ್ಲಿಂಗ್ ಕಂಪೆನಿಗಳಿಗೆ ಹಣವನ್ನು ಕೆಲ ಬ್ಯಾಂಕುಗಳ ಶಾಖೆಗಳಿಗೇ ತರಲು ಹೇಳಲಾಗಿದೆ.
ಭಾರತದ ಎ ಟಿ ಎಂ ಜಾಲದಲ್ಲಿರುವ ರೂ 25,000 ಕೋಟಿ ಹಣದಲ್ಲಿ ಇಲ್ಲಿಯ ತನಕ ಕೇವಲ ಶೇ 30 ರಷ್ಟು ಮಾತ್ರ 100 ರೂ ನೋಟುಗಳಾಗಿವೆ. ಶೇ 50 ರಷ್ಟು ನಗದು ರೂ 500 ಹಾಗೂ ರೂ 1000 ನೋಟುಗಳದ್ದಾಗಿವೆ.
ಕನಿಷ್ಠ ಕೆಲ ದಿನಗಳ ತನಕ ಎ ಟಿ ಎಂ ಗಳಲ್ಲಿ ಅಗತ್ಯವಾದ ಹಣ ತುಂಬಿಸುವುದು ಬ್ಯಾಂಕುಗಳಿಗೆ ಸವಾಲಿನ ಕೆಲಸವಾಗುತ್ತದೆ, ಎಂದು ಹಿರಿಯ ಬ್ಯಾಂಕ್ ಅಧಿಕಾರಿಯೊಬ್ಬರು ಹೇಳುತ್ತಾರೆ.







