ಉಡುಪಿ: ನಾಲ್ಕನೆ ಹಣಕಾಸು ಆಯೋಗದಿಂದ ಸಮಾಲೋಚನಾ ಸಭೆ

ಉಡುಪಿ, ನ.9: ಸ್ಥಳೀಯ ಸಂಸ್ಥೆಗಳಿಗೆ ಪೂರಕ ಆರ್ಥಿಕ ವ್ಯವಸ್ಥೆ ನಿರ್ವಹಣೆ ಸಂಬಂಧ ನೀತಿ ನಿರೂಪಣೆ ಮಾಡಲು ನಾಲ್ಕನೆ ಹಣಕಾಸು ಆಯೋಗದ ಸದಸ್ಯರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.
17 ಜಿಲ್ಲೆಗಳಲ್ಲಿ ಸಭೆ ನಡೆಸಿರುವ ಸದಸ್ಯರು, ಉಡುಪಿ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ತೆರಿಗೆ ಪಾವತಿ, ಖರ್ಚು ಹಾಗೂ ಬಜೆಟ್ ಕುರಿತು ಜನಪ್ರತಿನಿಧಿಗಳ ಅಭಿಪ್ರಾಯ ಆಲಿಸಿದರು. ಈ ಸಂಬಂಧ ಆಯೋಗ ನೀಡಿರುವ ಪ್ರಶ್ನಾವಳಿ ಯನ್ನು ಸಮಗ್ರವಾಗಿ ತುಂಬಿ ಇನ್ನೊಂದು ವಾರದೊಳಗಾಗಿ ಸಲ್ಲಿಸಲು ಅವರು ಸೂಚಿಸಿದರು.
ಕಾರ್ಕಳ ಪುರಸಭೆ ಉಪಾಧ್ಯಕ್ಷ ಗಿರಿಧರ ನಾಯಕ್, ಅಸಮರ್ಪಕ ಯುಜಿಡಿ ವ್ಯವಸ್ಥೆಯ ಬಗ್ಗೆ ಗಮನ ಸೆಳೆದರೆ, ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷ ವಸುಮತಿ ನಾಗೇಶ್ ಅವರು ಗೌರವಧನ ಕೊರತೆ, ಕಾಮಗಾರಿಗೆ ಹಣ ಕಡಿಮೆ ಇರುವ ಬಗ್ಗೆ, ಖಾಯಂ ಇಂಜಿನಿಯರ್ ಬೇಕೆಂದು ಕೇಳಿದರು.
ಕುಂದಾಪುರ ಪುರಸಭೆ ಅಧ್ಯಕ್ಷ ವಸಂತಿ ಎಂ. ಸಾರಂಗ ತುರ್ತು ಕಾಮಗಾರಿಗೆ ಹೆಚ್ಚಿನ ಅನುದಾನದ ಬೇಡಿಕೆಯನ್ನು ಮುಂದಿಟ್ಟರು. ಕಾಪು ಪುರಸಭೆ ಅಧ್ಯಕ್ಷರಾದ ಸೌಮ್ಯ ಹೊಸ ಪುರಸಭೆ ರಚನೆಯಾದ್ದರಿಂದ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದರು. ಉಡುಪಿ ಸಿಎಂಸಿ ಅಧ್ಯಕ್ಷರು ಮತ್ತು ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ನಡೆಸುವುದಾಗಿಯೂ ಆಯೋಗದ ಸದಸ್ಯರು ಹೇಳಿದರು. ಜಿಲ್ಲಾಧಿಕಾರಿ ಟಿ ವೆಂಕಟೇಶ್ ಉಸ್ಥಿತರಿದ್ದರು.
ಆಯೋಗದ ಸದಸ್ಯರಾದ ಎಚ್.ಡಿ.ಅಮರನಾಥ್, ಡಾ.ಎಸ್. ಶಶಿಧರ್, ಪ್ರಸನ್ನ, ಜಾಪರ್ ಷರೀಪ್, ಉಡುಪಿ ನಗರಸಭೆ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷ ಸಂದ್ಯಾ ತಿಲಕ್, ಅಪರ ಜಿಲ್ಲಾಧಿಕಾರಿ ಅನುರಾಧ, ಪಿಡಿ ಅರುಣಪ್ರಭ, ಪೌರಾಯುಕ್ತ ಮಂಜುನಾಥಯ್ಯ, ಎಲ್ಲ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.







