ವಿಶ್ವಾಸದ ಮನೆ: ಹೊರರಾಜ್ಯಗಳ 10 ಮಂದಿ ಮಾನಸಿಕ ಅಸ್ವಸ್ಥರು ಗುಣಮುಖ

ಉಡುಪಿ, ನ.9: ಶಂಕರಪುರದಲ್ಲಿರುವ ‘ವಿಶ್ವಾಸದ ಮನೆ’ ಮಾನಸಿಕ ಅಸ್ವಸ್ಥರ ಪುನರ್ ವಸತಿ ಕೇಂದ್ರದ ಆರೈಕೆಯಿಂದ ಗುಣಮುಖರಾಗಿರುವ ಹೊರ ರಾಜ್ಯಗಳ ಒಟ್ಟು 10 ಮಂದಿ ಮಾನಸಿಕ ಅಸ್ವಸ್ಥರನ್ನು ನ.10ರಂದು ಅವರ ಮನೆಗಳಿಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಕೇಂದ್ರದ ಅಧ್ಯಕ್ಷ ಪಾ.ಸುನೀಲ್ ಜಾನ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
2005ರ ಸೆ.4ರಂದು ಶಂಕರಪುರ ಪೇಟೆಯಲ್ಲಿ ಆಂಧ್ರಪ್ರದೇಶದ ವೆಂಕಟಾಚಲ ನಾಯ್ಡು, 2015ರ ಫೆ.4ರಂದು ಕಟಪಾಡಿಯಲ್ಲಿ ಆಂಧ್ರಪ್ರದೇಶದ ಬಾಬು, 2015ರ ನ.17ರಂದು ಬೆಳ್ಮಣ್ ನಂದಳಿಕೆಯಲ್ಲಿ ಕೇರಳ ಕಾಸರಗೋಡಿನ ಶ್ರೀದೇವಿ, 2016ರ ಮಾ.14ರಂದು ಉದ್ಯಾವರ ಬಲಾಯಿಪಾದೆ ಬಳಿ ಆಂಧ್ರಪ್ರದೇಶದ ವಂಶಿ, 2016ರ ಮಾ.24ರಂದು ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ತಮಿಳುನಾಡಿನ ಮರ್ಲಯ್ಯ, 2016ರ ಮೇ 4ರಂದು ಸಾಸ್ತಾನ ಸಮೀಪ ಕೇರಳದ ರಜಾಕ್ ಮತ್ತು ಕುಂದಾಪುರ ಕೋಟೇಶ್ವರ ಬಸ್ ನಿಲ್ದಾಣದ ಸಮೀಪ ತಮಿಳುನಾಡಿನ ಕಣ್ಣನ್, 2016ರ ಮೇ 5ರಂದು ಕೊಲ್ಲೂರು ಕ್ರಾಸ್ ಬಳಿ ತೆಲಂಗಾಣದ ನಂಬಯ್ಯ, 2016ರ ಮೇ 11ರಂದು ಬೈಂದೂರು ರಸ್ತೆ ಬದಿಯಲ್ಲಿ ಆಂಧ್ರಪ್ರದೇಶದ ಲಕ್ಷ್ಮೀ, 2016ರ ಆ.19ರಂದು ಕಾಪು ಸಮೀಪ ಆಂಧ್ರಪ್ರದೇಶದ ಒಡಿಯಪ್ಪ ಎಂಬವರು ರಸ್ತೆ ಬದಿಯಲ್ಲಿ ತೀರಾ ಅಸಹ್ಯ ರೀತಿಯಲ್ಲಿ ತಿರುಗಾಡುತ್ತಿದ್ದ ವೇಳೆ ಪತ್ತೆಯಾಗಿದ್ದರು.
ಇವರಿಗೆ ವಿಶ್ವಾಸದ ಮನೆಯಲ್ಲಿ ಆರೈಕೆ ಹಾಗೂ ಚಿಕಿತ್ಸೆ ನೀಡಿ ಸಂಪೂರ್ಣ ಗುಣಮುಖರನ್ನಾಗಿಸಲಾಗಿದೆ. ಇದೀಗ ಇವರೆಲ್ಲ ತಮ್ಮ ಹೆಸರು ಹಾಗೂ ವಿಳಾಸವನ್ನು ತಿಳಿಸಿದ್ದು, ಮನೆಗೆ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಆದುದರಿಂದ ಸಂಸ್ಥೆಯ ಸ್ವಂತ ವಾಹನದಲ್ಲಿ ಇವರನ್ನು ಅವರವರ ಮನೆಗೆ ಕರೆದುಹೋಗುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಫಾ.ಮಾಬೆಲ್ ಕ್ಯಾಸ್ತಲಿನೋ, ಎಡ್ವರ್ಡ್ ಮೆನೇಜಸ್, ಎಲಿಜಬೇತ್ ಉಪಸ್ಥಿತರಿದ್ದರು.





