ನೋಟು ರದ್ದತಿ : ಪ್ರಧಾನಿಯ ವಿರುದ್ಧ ಸಿಪಿಎಂ ವಾಗ್ದಾಳಿ

ಕೋಲ್ಕತಾ, ನ.9: ರೂ. 500 ಹಾಗೂ 1000ದ ನೋಟುಗಳನ್ನು ರದ್ದುಪಡಿಸಿದ ನರೇಂದ್ರ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿಪಿಎಂನ ಬಂಗಾಳ ಘಟಕದ ಕಾರ್ಯದರ್ಶಿ ಸೂರ್ಯಕಾಂತ ಮಿಶ್ರಾ, ಬಿಜೆಪಿಯು ದೇಶದಲ್ಲಿ ಆಡಳಿತವನ್ನು ದೊಂಬರಾಟವಾಗಿ ಬದಲಾಯಿಸಿದೆಯೆಂದು ಆರೋಪಿಸಿದ್ದಾರೆ.
ರೂ. 500 ಹಾಗೂ 1000ದ ನೋಟುಗಳ ರದ್ದತಿಯು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಒಂದು ಗಿಮಿಕ್ ಆಗಿದೆ. ಪ್ರಧಾನಿಯ ಈ ಘೋಷಣೆ ಯಾವುದೇ ಫಲ ನೀಡದು. ಕಪ್ಪು ಹಣವನ್ನು ದೇಶದಲ್ಲಿ ಶೇಖರಿಸಿಡುವ ದಿನಗಳು ಎಂದೋ ಕಳೆದು ಹೋಗಿವೆ. ಜನರೀಗ ಹಣವನ್ನು ವಿದೇಶಗಳ ತೆರಿಗೆ ಸ್ವರ್ಗಗಳಲ್ಲಿ ರಾಶಿ ಹಾಕುತ್ತಾರೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡುತ್ತಾರೆಂದು ಅವರು ಹೇಳಿದ್ದಾರೆ.
ಬಿಜೆಪಿ ಹಾಗೂ ಆರೆಸ್ಸೆಸ್ ಇದರಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಲಿವೆಯೆಂದು ಮಿಶ್ರಾ ಆಪಾದಿಸಿದ್ದಾರೆ.
ಎಲ್ಲವನ್ನೂ ಜನ ಸಾಮಾನ್ಯನ ಬೆಲೆಯಲ್ಲಿ ಮಾಡಲಾಗುತ್ತಿದೆ. ಬಿಜೆಪಿ ಸರಕಾರವು ದೇಶದ ಆಡಳಿತವನ್ನು ದೊಂಬರಾಟವಾಗಿ ಪರಿವರ್ತಿಸುವಂತೆ ತೋರುತ್ತಿದೆಯೆಂದು ಅವರು ಟೀಕಿಸಿದ್ದಾರೆ.





