ಬದಿಯಡ್ಕ: ಶಾಲೆಗೆ ತೆರಳುತ್ತಿದ್ದ ಬಾಲಕಿಯ ಅಪಹರಣಕ್ಕೆ ಯತ್ನ

ಮಂಜೇಶ್ವರ, ನ.9: ಶಾಲೆಗೆ ನಡೆದುಕೊಂಡು ತೆರಳುತ್ತಿದ್ದ ಎರಡನೆ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿರುವ ಕುರಿತು ದೂರು ನೀಡಲಾಗಿದೆ. ಮಂಗಳವಾರ ಬೆಳಗ್ಗೆ ಪಿಲಾಂಕಟ್ಟೆ ಸಮೀಪ ಈ ಘಟನೆ ನಡೆದಿದೆ.
ಬೆಳಗ್ಗೆ 9:30ರ ಸುಮಾರಿಗೆ ಏಕಾಂಗಿಯಾಗಿ ಶಾಲೆಗೆ ನಡೆದುಕೊಂಡು ತೆರಳುತ್ತಿದ್ದ ಬಾಲಕಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಪ್ಪು ಬಣ್ಣದ ಕಾರಿನಲ್ಲಿದ್ದವರು ಹತ್ತಿರಕ್ಕೆ ಕರೆದಿದ್ದಾರೆ. ಅಲ್ಲಿಗೆ ತೆರಳಲು ಬಾಲಕಿ ನಿರಾಕರಿಸಿದಾಗ ತಂಡ ಕಾರಿನಿಂದ ಇಳಿದು ಬಲವಂತವಾಗಿ ಬಾಲಕಿಯನ್ನು ಕಾರಿಗೆ ಹತ್ತಿಸಿದೆ. ಬಳಿಕ ಹಲವು ರಸ್ತೆಗಳ ಮೂಲಕ ಸಂಚರಿಸಿ, ಶಾಲೆ ಪರಿಸರದ ರಸ್ತೆಯಲ್ಲಿ ಬಾಲಕಿಯನ್ನು ಬಿಟ್ಟು ತಂಡ ಪರಾರಿಯಾಗಿದೆ ಎನ್ನಲಾಗಿದೆ. ಘಟನೆಯಿಂದ ಬೆಚ್ಚಿದ ಬಾಲಕಿಯು ಶಾಲಾ ಅಧ್ಯಾಪಕರಲ್ಲಿ ಈ ಬಗ್ಗೆ ವಿವರಿಸಿದ್ದು, ಮುಖ್ಯೋಪಾಧ್ಯಾಯರು ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಕೂಡಲೇ ಬದಿಯಡ್ಕ ಪೊಲೀಸರು ಹಾಗೂ ಮಹಿಳಾ ಪೊಲೀಸರು ಸ್ಥಳಕ್ಕೆ ತೆರಳಿ ಬಾಲಕಿಯಿಂದ ಘಟನೆಯ ಕುರಿತು ಹೇಳಿಕೆಯನ್ನು ಪಡೆದು ಕೇಸು ದಾಖಲಿಸಿಕೊಂಡಿದ್ದಾರೆ. ಈ ಘಟನೆಗೆ ಕಾರಣ ನಿಗೂಢವಾಗಿದ್ದು, ಸಮಗ್ರ ತನಿಖೆ ನಡೆಸುವುದಾಗಿ ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ.





