‘ಚಿಲ್ಲರೆ’ ಇದ್ದರೆ ಮಾತ್ರ ಊಟ.....!

ಮಂಗಳೂರು,ನ.9: ದೇಶದಲ್ಲಿ ಚಲಾವಣೆಯಲ್ಲಿದ್ದ 500-1000 ರೂ ಮುಖ ಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ ಪರಿಣಾಮವಾಗಿ ನಗರದ ವಿವಿಧ ಕಡೆಗಳಲ್ಲಿ ವ್ಯಾಪಾರ ವಹಿವಾಟು ಅಸ್ತವ್ಯಸ್ತಗೊಂಡಿದ್ದು ಸರಿಪಡಿಸಲು ಇನ್ನೂ ಕೆಲವು ದಿನಗಳು ಬೇಕಾಗಬಹುದು. ತುರ್ತಾಗಿ ತೆಗೆದುಕೊಂಡ ಕ್ರಮದಿಂದ ಹಾಗೂ ಕೆಲವು ಗೊಂದಲದಿಂದ ಮತ್ತು ದಿಢೀರಾಗಿ 100 ರೂ. ಮುಖ ಬೆಲೆಯ ನೋಟಿನ ಕೊರತೆಯೂ ಉಂಟಾದ ಪರಿಣಾಮವಾಗಿ ಜನ ಸಾಮಾನ್ಯರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಚಿಲ್ಲರೆ ಇದ್ದರೆ ಮಾತ್ರ ಊಟ..!
ಕೆಲವರು 500ರೂ ಮುಖಬೆಲೆಯ ನೋಟು ಹಿಡಿದು ಹೊಟೇಲಿಗೆ ಊಟ ಮಾಡಲು ಹೊರಟರೆ ಅಲ್ಲಿಯೂ ಚಿಲ್ಲರೆ ಇದ್ದರೆ ಮಾತ್ರ ಊಟ !ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಸೆಂಟ್ರಲ್ ಮಾರುಕಟ್ಟೆ ಬಳಿಯ ಕೂಲಿ ಕಾರ್ಮಿಕರೊಬ್ಬರ ಬಳಿ ಕೂಲಿಯಾಗಿ ದೊರೆತ 500 ರೂ. ಬಿಟ್ಟರೆ ಬೇರೇನೂ ಇರಲಿಲ್ಲ. ಅವರು ಬೆಳಗ್ಗಿನ ಉಪಹಾರ ಸೇವಿಸಲು ಎಲ್ಲಿ ಹೋದರೂ ಚಿಲ್ಲರೆ ಇದ್ದರೆ ಮಾತ್ರ ಉಪಹಾರ, ಊಟ ಎನ್ನುತ್ತಿದ್ದರು. ಸುಮಾರು 3 ಗಂಟೆಗಳ ಕಾಲ ನಗರದಲ್ಲಿ ಸುತ್ತಾಡಿದರೂ ಯಾರೂ 500 ನೋಟನ್ನು ಸ್ವೀಕರಿಸಿ ಅವರಿಗೆ ಉಪಹಾರ ನೀಡಲು ಹಿಂದೇಟು ಹಾಕಿದಾಗ ಸೆಂಟ್ರಲ್ ಮಾರ್ಕೆಟ್‌ನ ಸಹ ಕಾರ್ಮಿಕನೊರ್ವ ತಾನು ತಂದಿದ್ದ ಉಪಹಾರವನ್ನು ಆತನಿಗೆ ನೀಡಿದ ಬಗ್ಗೆ ಪತ್ರಿಕೆಗೆ ತಿಳಿಸಿದ್ದಾರೆ.
ಜನರಲ್ಲಿ ಉಂಟಾದ ಗೊಂದಲದಿಂದ 500, 1000 ನೋಟನ್ನು ಪಡೆಯಲು ಹಿಂದೇಟು ಹಾಕಿದ ಪರಿಸ್ಥಿತಿ ನಗರದಾದ್ಯಂತ ಇಂದು ನಿರ್ಮಾಣವಾಗಿದೆ. ‘‘ನನ್ನ ಬಳಿ 500,1000 ನೋಟಿನ ಚಿಲ್ಲರೆ ನೀಡಲು ಹಣ ಇಲ್ಲದೆ ಇದ್ದ ಕಾರಣ ನಾನು ನನ್ನ ಬಳಿ ಬಂದ ಗಿರಾಕಿಗಳನ್ನು ಬಿಡಬೇಕಾಯಿತು.ಇದರಿಂದ ನನಗೆ ನಷ್ಟವಾಗಿದೆ. ಸರಕಾರ ನೋಟನ್ನು ಹಿಂದಕ್ಕೆ ಪಡೆದು ಚಿಲ್ಲರೆ ಸಮಸ್ಯೆ ನಿವಾರಣೆ ಬಗ್ಗೆ ಗಮನಹರಿಸುತ್ತಿದ್ದರೆ ಈ ರೀತಿಯ ಗೊಂದಲ ಉಂಟಾಗುತ್ತಿರಲಿಲ್ಲ’’ ಎಂದು ತೊಕ್ಕೊಟ್ಟಿನ ವ್ಯಾಪಾರಿಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು.
ಪೆಟ್ರೋಲ್ ಬಂಕ್‌ನಲ್ಲಿ ನಿರ್ಬಂಧ ಪೆಟ್ರೋಲ್ ಬಂಕ್‌ಗಳಲ್ಲಿ 500 ಅಥವಾ 1000ದ ನೋಟು ನೀಡಿ 100 ರೂಪಾಯಿಯ ಪೆಟ್ರೋಲ್ ಕೇಳಿದರೆ ಚಿಲ್ಲರೆ ಇದ್ದರೆ ಮಾತ್ರ. ಇಲ್ಲವಾದಲ್ಲಿ 500ರೂ ಅಥವಾ 1000ದ ಪೆಟ್ರೋಲ್ ಪಡೆಯಬೇಕು ಎನ್ನುವ ನಿರ್ಬಂಧ ಉಂಟಾಗಿದ್ದ ಕಾರಣ ಇಂದು ನಗರದಲ್ಲಿ ಕೆಲವು ವಾಹನಗಳು ರಸ್ತೆಗಿಳಿಯದ ಪರಿಸ್ಥಿತಿ ಉಂಟಾಗಿತ್ತು. ಈ ಬಗ್ಗೆ ನಗರದ ಬಲ್ಮಠ ಜಂಕ್ಷನ್ ಹಾಗೂ ಇತರ ಕೆಲವು ಬಂಕ್‌ಗಳಲ್ಲಿ ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ.
‘‘ಈ ಪರಿಸ್ಥಿತಿ ಹೀಗೆ ಮುಂದುವರಿದರೆ ನಮ್ಮ ಗತಿಯೇನು?, ನಮ್ಮ ಬಳಿ ಯಾವ ಕಪ್ಪುಹಣವೂ ಇಲ್ಲ. ಬಿಳಿ ಹಣವೂ ಇಲ್ಲ. ದಿನ ನಿತ್ಯ ದುಡಿಯುತ್ತೇವೆ.ಇವತ್ತು ಬೆಳಗ್ಗೆ ಸ್ವಲ್ಪ ಜನ ಇದ್ದರು. ಮಧ್ಯಾಹ್ನ ನಂತರ ವ್ಯಾಪಾರಕ್ಕೆ ಜನವೂ ಇಲ್ಲ’’ ಎಂದು ಸ್ಟೇಟ್‌ಬ್ಯಾಂಕ್, ವೆಲೆನ್ಸಿಯಾದ ತರಕಾರಿ, ಹಣ್ಣು ಹಂಪಲು ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡರು.







