ಟ್ರಂಪ್ ವಿಜಯಕ್ಕೆ ಏನು ಕಾರಣ?

ವಾಶಿಂಗ್ಟನ್, ನ. 9: ಕಾಲೇಜು ಪದವಿ ಹೊಂದಿರದ ಬಿಳಿ ಪುರುಷ ಮತ್ತು ಮಹಿಳೆಯರನ್ನೊಳಗೊಂಡ ನೌಕರ ವರ್ಗ ಡೊನಾಲ್ಡ್ ಟ್ರಂಪ್‌ಗೆ ಮತ ಹಾಕಿದೆ.ಕಳೆದ 40 ವರ್ಷಗಳ ಅವಧಿಯಲ್ಲಿ ಅಮೆರಿಕದ ಆರ್ಥಿಕತೆಯು ಬಿಳಿಯ ಪುರುಷ ಕಾರ್ಮಿಕ ವರ್ಗವನ್ನು ಶೋಷಣೆಗೈದಿತ್ತು. ಅದು ಅವರ ವೇತನಕ್ಕೂ ಕಡಿವಾಣ ಹಾಕಿತ್ತು. ಅವರು ಅತ್ಯುತ್ತಮವಾಗಿ ಮಾಡುವ ಕೆಲಸವನ್ನು ಅದು ಅಮಾನ್ಯ ಮಾಡಿತ್ತು.
ಅವರ ಪ್ರದೇಶಗಳಲ್ಲಿರುವ ಕಾರ್ಖಾನೆಗಳು, ಗಣಿಗಳು ಮತ್ತು ಅಂಗಡಿಗಳನ್ನು ಅದು ಮುಚ್ಚಿತ್ತು. ಅವರು ವಾಸಿಸದ ನಗರಗಳಲ್ಲಿ ನೂತನ ಕೈಗಾರಿಕೆಗಳ ನಿರ್ಮಾಣವಾಗಿತ್ತು. ಹಾಗೂ ಕಾಲೇಜು ಪದವಿಗಳನ್ನು ಹೊಂದಿದ ಕೆಲಸಗಾರರನ್ನು ಈ ಕೈಗಾರಿಕೆಗಳಿಗೆ ನೇಮಿಸಿತ್ತು. ಇದರಿಂದಾಗಿ ಪದವಿ ಹೊಂದಿರದ ಈ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿತ್ತು.ಅಮೆರಿಕದ ಜಾಗತೀಕರಣಗೊಂಡ ಆರ್ಥಿಕತೆಯಿಂದ ತೊಂದರೆಗೊಳಗಾದವರು ಅವರು ಮಾತ್ರ ಅಲ್ಲ. ಆದರೆ, ಈ ಕಾರ್ಮಿಕ ಸಮುದಾಯ ಮಾತ್ರ ವ್ಯವಸ್ಥೆಯ ಬಗ್ಗೆ ತೀವ್ರ ಆಕ್ರೋಶಕ್ಕೆ ಈಡಾಯಿತು.ಇದನ್ನು ಬಂಡವಾಳ ಮಾಡಿಕೊಂಡ ಟ್ರಂಪ್, ಅವರ ಸಮಸ್ಯೆಗಳ ಬಗ್ಗೆ ಹಾಗೂ ಅವರ ಭೀತಿಗಳ ಬಗ್ಗೆ ನೇರವಾಗಿ ಮಾತನಾಡಿದರು. ಅಮೆರಿಕದ ಬಿಳಿಯ ಕಾರ್ಮಿಕ ವರ್ಗ ಟ್ರಂಪ್‌ರನ್ನು ಬಲವಾಗಿ ಬೆಂಬಲಿಸಿತು.





