ಶ್ರೀಕಾಂತ್ ಭಾರತದ ದುಬಾರಿ ಆಟಗಾರ
ಪಿಬಿಎಲ್ ಆಟಗಾರರ ಹರಾಜು

ಹೊಸದಿಲ್ಲಿ, ನ.9: ದ್ವಿತೀಯ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್(ಪಿಬಿಎಲ್)ನ ಆಟಗಾರರ ಹರಾಜು ಪ್ರಕ್ರಿಯೆ ಬುಧವಾರ ಇಲ್ಲಿ ನಡೆದಿದ್ದು, ಒಲಿಂಪಿಕ್ಸ್ ಚಾಂಪಿಯನ್ ಸ್ಪೇನ್‌ನ ಕಾರೊಲಿನ್ ಮರಿನ್ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದರು. ಶ್ರೀಕಾಂತ್ ಹೆಚ್ಚು ಬೆಲೆಗೆ ಮಾರಾಟವಾದ ಭಾರತದ ಆಟಗಾರ ಎನಿಸಿಕೊಂಡರು.
ಮರಿನ್‌ರನ್ನು ಹೈದರಾಬಾದ್ ಹಂಟರ್ಸ್ ತಂಡ 61.5 ಲಕ್ಷ ರೂ.ಗೆ ಖರೀದಿಸಿತು. ಶ್ರೀಕಾಂತ್ 51 ಲಕ್ಷ ರೂ.ಗೆ ಅವಾಧ್ ವಾರಿಯರ್ಸ್ ತಂಡದ ಪಾಲಾದರು.
ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು 39 ಲಕ್ಷ ರೂ.ಗೆ ಹರಾಜಾದರು. ರಿಯೋ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಸಿಂಧು ಹರಾಜಿನಲ್ಲಿ ಐಕಾನ್ ಆಟಗಾರ್ತಿಯಾಗಿದ್ದರೂ ಹೆಚ್ಚಿನ ಬೆಲೆಗೆ ಹರಾಜಾಗಲಿಲ್ಲ.
ಮೊದಲ ಆವೃತ್ತಿಯ ಪಿಬಿಎಲ್‌ನಲ್ಲಿ ಗರಿಷ್ಠ ಮೊತ್ತಕ್ಕೆ ಹರಜಾಗಿದ್ದ ಸೈನಾ ನೆಹ್ವಾಲ್ ಮೊದಲ ಸುತ್ತಿನ ಬಿಡ್ಡಿಂಗ್‌ನಲ್ಲಿ ಮಾರಾಟವಾಗಲಿಲ್ಲ. ಅಂತಿಮವಾಗಿ ಅವಾದ್ ವಾರಿಯರ್ಸ್ ಮೂಲ ಬೆಲೆ 33 ಲಕ್ಷ ರೂ.ಗೆ ತನ್ನ ತಂಡದಲ್ಲೇ ಉಳಿಸಿಕೊಂಡಿತು.
ದಕ್ಷಿಣ ಕೊರಿಯಾದ ಆಟಗಾರ್ತಿ ಸಂಗ್ ಜಿ ಹ್ಯೂನ್ ಎರಡನೆ ಗರಿಷ್ಠ ಮೊತ್ತಕ್ಕೆ ಹರಾಜಾದರು. ಮುಂಬೈ ರಾಕೆಟ್ಸ್ ತಂಡ ಹ್ಯೂನ್‌ರನ್ನು 60 ಲಕ್ಷ ರೂ.ಗೆ ಖರೀದಿಸಿತು. ಡೆನ್ಮಾರ್ಕ್‌ನ ಜಾನ್ ಒ’ಜಾರ್ಜನ್ಸನ್ ಹಾಲಿ ಚಾಂಪಿಯನ್ ದಿಲ್ಲಿ ಏಸೆರ್ಸ್‌ಗೆ 59 ಲಕ್ಷ ರೂ.ಗೆ ಹರಾಜಾದರು.
ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್‌ಸನ್ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ 39 ಲಕ್ಷ ರೂ.ಗೆ ಹರಾಜಾದರು. ವಾನ್ ಹೊ ಸನ್ 39 ಲಕ್ಷ ರೂ.ಗೆ ದಿಲ್ಲಿ ಫ್ರಾಂಚೈಸಿ ಪಾಲಾದರು.







