ಟಿಪ್ಪುಜಯಂತಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಮಡಿಕೇರಿ, ನ.9 : ರಾಜ್ಯ ಸರಕಾರದ ಆದೇಶದಂತೆ ಕೊಡಗು ಜಿಲ್ಲಾಡಳಿತ ನ.10 ರಂದು ಟಿಪ್ಪು ಜಯಂತಿಯನ್ನು ಆಚರಿಸಲು ಸರ್ವ ಸಿದ್ಧತೆ ಮಾಡಿಕೊಂಡಿದೆ. ಮಡಿಕೇರಿಯ ಕೋಟೆ ಹಳೇ ವಿಧಾನ ಸಭಾಂಗಣ, ಸೋಮವಾರಪೇಟೆಯ ಚೆನ್ನಬಸಪ್ಪಸಭಾಂಗಣ ಹಾಗೂ ವೀರಾಜಪೇಟೆಯ ಟೌನ್ ಹಾಲ್‌ನಲ್ಲಿ ಟಿಪ್ಪುಜಯಂತಿಯ ಸಮಾರಂಭಗಳು ನಡೆಯಲಿವೆ.
ಕೊಡಗು ಭಾಗದಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೆಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ಕೋಟೆ ಹಳೇ ವಿಧಾನ ಸಭಾಂಗಣದ ಸುತ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸಭಾಂಗಣವನ್ನು ಪ್ರವೇಶಿಸಲು ಅವಕಾಶವಿರುವ ಮುಖ್ಯ ದ್ವಾರವನ್ನು ಹೊರತು ಪಡಿಸಿ ಉಳಿದ ಎಲ್ಲಾ ದ್ವಾರಗಳಿಗೆ ಮರದ ಹಲಗೆಗಳನ್ನು ಹೊಡೆದು ಬಂದ್ ಮಾಡಲಾಗಿದೆ. ಸಭಾಂಗಣದ ಕಿಟಕಿಗಳಿಗೂ ಮರದ ತುಂಡುಗಳನ್ನು ಹೊಡೆದು ಸುರಕ್ಷತೆಯನ್ನು ಕಲ್ಪಿಸಲಾಗಿದೆ. ಆಯಾಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಕೋಟೆ ಆವರಣವನ್ನು ಪ್ರವೇಶಿಸುವ ಎರಡು ದ್ವಾರಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ನ.10 ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕೋಟೆ ಸುತ್ತ ಸುಮಾರು 300 ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸುವ ಸಾಧ್ಯತೆ ಇದೆ.
ಬಂದ್‌ನ ಗೊಂದಲ
ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಸ್ವಯಂ ಘೋಷಿತ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ಪ್ರಯಾಣಿಕರ ಹಿತದೃಷ್ಟಿಯಿಂದ ನ.10 ರಂದು ಖಾಸಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಶಾಲಾ ಕಾಲೆೇಜುಗಳಿಗೆ ರಜೆ ಘೋಷಣೆ ಮಾಡದಿದ್ದರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಖಾಸಗಿ ಬಸ್‌ಗಳನ್ನೇ ಅವಲಂಭಿಸಿರುವುದರಿಂದ ಗೊಂದಲ ಸೃಷ್ಟಿಯಾಗುವ ಸಾಧ್ಯತೆಗಳಿದೆ. ನಗರದ ವಿದ್ಯಾರ್ಥಿಗಳು ಹಾಗೂ ಸರಕಾರಿ ಇಲಾಖಾ ಸಿಬ್ಬಂದಿ ಆತಂಕದ ನಡುವೆ ತೆರಳಬೇಕಾದ ಪರಿಸ್ಥಿತಿ ಎದುರಾಗಬಹುದು.
ಪೊಲೀಸರಿಂದ ಪಥಸಂಚಲನದ ಮೂಲಕ ಅಭಯ ಟಿಪ್ಪು ಜಯಂತಿಯ ಕುರಿತು ಪರ-ವಿರೋಧದ ಹೇಳಿಕೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ 1,500ಕ್ಕೂ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಮಡಿಕೇರಿ ನಗರ ಸೇರಿದಂತೆ ವಿವಿಧೆಡೆ ನೂರಾರು ಪೊಲೀಸ್ ಸಿಬ್ಬಂದಿ ಪಥಸಂಚಲನ ನಡೆಸಿ ಶಾಂತಿ-ಸುವ್ಯಸ್ಥೆಯನ್ನು ಕಾಪಾಡಲು ನಾವು ಬದ್ಧ ಎಂದು ಸಾರ್ವಜನಿಕರಿಗೆ ಅಭಯ ನೀಡಿದರು.





