ಕಪ್ಪು ಹಣ ಮನೆಯಲ್ಲಿ ಬಚ್ಚಿಡೋಲ್ಲ : ಕೇರಳ ವಿತ್ತ ಸಚಿವ ಇಸಾಕ್
ನೋಟುಗಳ ಅಮಾನ್ಯ ನಿರ್ಧಾರಕ್ಕೆ ಟೀಕೆ

ತಿರುವನಂತಪುರಂ, ನ.9: ಕಪ್ಪುಹಣ ಮತ್ತು ನಕಲಿ ನೋಟುಗಳ ನಿಯಂತ್ರಣದ ಕಾರಣ ನೀಡಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 500 ಮತ್ತು 1000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿರುವ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇದೊಂದು ದೊಡ್ಡ ಜೋಕ್ ಎಂದು ಬಣ್ಣಿಸಿರುವ ಕೇರಳದ ವಿತ್ತ ಸಚಿವ ಥೋಮಸ್ ಇಸಾಕ್, ಇದು ರಾಷ್ಟ್ರೀಯ ವಿಪತ್ತು. ಇದರಿಂದ ಅರ್ಥವ್ಯವಸ್ಥೆಗೆ ಬ್ರೇಕ್ ಹಾಕಿದಂತಾಗಿದೆ ಎಂದಿದ್ದಾರೆ.
‘ಇಂಡಿಯಾ ಟುಡೆ’ ಜೊತೆ ಮಾತನಾಡಿದ ಅವರು, ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಲಿರುವ ವಿವೇಚನಾರಹಿತ ಕ್ರಮ ಇದಾಗಿದೆ. ಪಾಕಿಸ್ತಾನದಿಂದ ಸರಬರಾಜು ಆಗುತ್ತಿರುವ ನಕಲಿ ನೋಟು ತಡೆಗಟ್ಟುವ ಕಾರಣ ನೀಡಿರುವುದು ಸರಿಯಲ್ಲ.
ಮನೆಯ ಅಲ್ಮೇರಾಗಳಲ್ಲಿ ಕಪ್ಪು ಹಣ ಶೇಖರಿಸಿ ಇಡುತ್ತಾರೆ ಎಂದು ಮೋದಿ ಭಾವಿಸಿದಂತಿದೆ. ಕಪ್ಪುಹಣದ ದೊಡ್ಡ ಪ್ರಮಾಣ ವಿದೇಶದಲ್ಲಿದೆ. ಉಳಿದ ಪ್ರಮಾಣವನ್ನು ಚಿನ್ನ ಮತ್ತು ಆಸ್ತಿಯ ರೂಪದಲ್ಲಿ ಹೂಡಿಕೆ ಮಾಡಲಾಗುತ್ತದೆ. ತಮ್ಮ ಬಳಿ ನಗದು ಇರಿಸಿಕೊಳ್ಳುವವರು ಜನಸಾಮಾನ್ಯರು ಮಾತ್ರ ಎಂದರು. ರಾಜ್ಯ ಸರಕಾರದ ಖಜಾನೆಯ ವ್ಯವಹಾರ ಹೇಗೆ ನಡೆಸುವುದು ಎಂಬ ಬಗ್ಗೆಯೂ ಗೊಂದಲವಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವಿದೇಶದಿಂದ ಕಪ್ಪು ಹಣ ವಾಪಸು ತಂದು ದೇಶದ ಪ್ರತಿಯೊಬ್ಬನ ಖಾತೆಯಲ್ಲೂ 15 ಲಕ್ಷ ರೂ. ಜಮೆಗೊಳಿಸುವುದಾಗಿ ಮೋದಿ ಹೇಳಿಕೆ ನೀಡಿದ್ದರು. ಅದು ಆಗಲಿಲ್ಲ. ಅದಕ್ಕಾಗಿ ಈ ನಾಟಕ ಎಂದು ಇಸಾಕ್ ಟೀಕಿಸಿದರು.







