ಉಡುಪಿ: ಕೇಂದ್ರದ ನಿರ್ಧಾರದಿಂದ ದೈನಂದಿನ ವ್ಯವಹಾರ ಅಸ್ತವ್ಯಸ್ತ

ಉಡುಪಿ, ನ.9: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ರಾತ್ರಿ ಹಠಾತ್ ಷೋಘಣೆಯೊಂದರಲ್ಲಿ 500ರೂ. ಹಾಗೂ 1,000ರೂ.ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿರುವುದರ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯಲ್ಲಿ ಜನರ ದೈನಂದಿನ ವ್ಯವಹಾರಗಳು ಅಸ್ತವ್ಯಸ್ತಗೊಂಡವು.
ಎಲ್ಲಾ ಬ್ಯಾಂಕುಗಳೊಂದಿಗೆ ಎಟಿಎಂಗಳನ್ನು ಎರಡು ದಿನಗಳ ಮಟ್ಟಿಗೆ ಮುಚ್ಚಿರುವುದರಿಂದ ಜನರು ತಮ್ಮ ದಿನದ ಆವಶ್ಯಕತೆಗಳಿಗೆ ಸಹ ಪರದಾಡುವ ಸ್ಥಿತಿ ಉಂಟಾಯಿತು. ಬಿಗ್ ಬಜಾರ್, ಚಿನ್ನದಂಗಡಿಗಳು ಸೇರಿದಂತೆ ಎಲ್ಲಾ ಕಡೆಗಳಲ್ಲೂ 500-1000ರೂ.ಗಳನ್ನು ನೋಡಿದರೆ ಕೆಂಡ ಮುಟ್ಟಿದವರಂತೆ ಹಿಂದೆ ಸರಿಯುತಿದ್ದರು. ಹೆಚ್ಚಿನ ಕಡೆಗಳಲ್ಲಿ ಈ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂಬ ಬೋರ್ಡ್‌ಗಳನ್ನು ಸಹ ತೂಗು ಹಾಕಿದ್ದರು.
ನಗರದ ಹೆಚ್ಚಿನ ಚಿನ್ನದಂಗಡಿಗಳು ಬಾಗಿಲು ಹಾಕಿದ್ದವು. ಆಭರಣ, ಭೀಮಾ ಜುವೆಲ್ಲರ್ಸ್‌ಗಳಂಥ ಕೆಲವು ಪ್ರಮುಖ ಚಿನ್ನದಂಗಡಿ ಬಾಗಿಲು ತೆರೆದಿದ್ದರೂ ನಗದು ವ್ಯವಹಾರಕ್ಕೆ, ಚಿನ್ನ ಖರೀದಿಗೆ ಅವಕಾಶವಿರಲಿಲ್ಲ. ಕಾರ್ಡ್ ಸ್ಪೈಪ್ ಮೂಲಕ ಮಾತ್ರ ವ್ಯವಹಾರಕ್ಕೆ ಅವಕಾಶ ನೀಡಲಾಗುತ್ತಿತ್ತು. ಇದರೊಂದಿಗೆ ಸ್ಕೀಮ್‌ಗಳಲ್ಲಿ ಹಣ ತೊಡಗಿಸಿದವರಿಗೆ ಮಾತ್ರ ಖರೀದಿ ಸಾಧ್ಯವಿತ್ತು. ಹೀಗಾಗಿ ಗ್ರಾಹಕರು ಅಂಗಡಿ ಪ್ರವೇಶಿಸುವ ಮುನ್ನವೇ ಅವರನ್ನು ವಿಚಾರಿಸಿ ಬಿಡಲಾಗುತ್ತಿತ್ತು.
ಪೆಟ್ರೋಲ್ ಬಂಕ್‌ಗಳಲ್ಲೂ ಸಹ ಗ್ರಾಹಕರಿಗೆ ಚಿಲ್ಲರೆ ಖರೀದಿಗೆ ಅವಕಾಶವಿರಲಿಲ್ಲ. ಚಿಲ್ಲರೆಯನ್ನು ನೀಡುತ್ತಿರಲಿಲ್ಲ. 500 ಅಥವಾ 1000ರೂ. ಪೂರ್ಣ ಮೊತ್ತಕ್ಕೆ ಪೆಟ್ರೋಲ್ ಇಲ್ಲವೇ ಡೀಸೆಲ್ ಖರೀದಿಸಬೇಕಿತ್ತು. ಹೊಟೇಲ್‌ಗಳಲ್ಲೂ ಬಿಲ್‌ನಷ್ಟು ಹಣ ಇದ್ದವರಿಗೆ ಮಾತ್ರ ಊಟ-ತಿಂಡಿ. 500ರೂ. ಇದ್ದರೆ ಪೂರ್ಣ ಮೊತ್ತದ ಬಿಲ್ ಮಾಡಬೇಕಿತ್ತು.
ಹೆಚ್ಚಿನೆಲ್ಲಾ ದೊಡ್ಡ ಅಂಗಡಿ ಹಾಗೂ ಹೊಟೇಲ್‌ಗಳ ಎದುರು 500-1000ರೂ. ನೋಟು ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಲಾಗಿತ್ತು. ಬಸ್‌ಗಳಲ್ಲೂ ಚಿಲ್ಲರೆ ವಿಷಯಕ್ಕೆ ಸಾಕಷ್ಟು ಜಗಳ ನಡೆದ ಬಗ್ಗೆ ವರದಿಯಾಗಿದೆ. ನಗರದಲ್ಲಿ ಬಿಗ್‌ಬಜಾರ್ ನಿನ್ನೆ ರಾತ್ರಿ 12:00 ಗಂಟೆಯವರೆಗೂ ತೆರೆದಿದ್ದು ವ್ಯಾಪಾರ ನಡೆಸಿದೆ.
ಒಟ್ಟಾರೆಯಾಗಿ ಕಿಸೆಯಲ್ಲಿ ದುಡ್ಡಿದ್ದರೂ, ಊಟ-ತಿಂಡಿ ಮಾಡಲಾಗದ, ತಮಗೆ ಬೇಕಾದುದನ್ನು ಖರೀದಿಸಲಾಗದ ಪರಿಸ್ಥಿತಿಗೆ ಜನ ಸಿಕ್ಕಿಹಾಕಿಕೊಂಡರು. ಸರಕಾರದ ನಿರ್ಧಾರದ ಕುರಿತು ತಿಳಿಯದ ಜನಸಾಮಾನ್ಯರು, ವಿಶೇಷವಾಗಿ ಹಳ್ಳಿಗರು ಇದರಿಂದ ತುಂಬಾ ತೊಂದರೆ ಅನುಭವಿಸಿದರು.







