ಹುಷಾರ್...! ತಿರುಗುಬಾಣವಾದೀತು ಅಧಿಕ ಮೌಲ್ಯದ ನೋಟು ನಿಷೇಧ!

500 ರೂ. ಹಾಗೂ 1000 ರೂ. ಹಳೆ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದ ಕೇಂದ್ರ ಸರಕಾರದ ಅಚ್ಚರಿಯ ನಡೆ ಹಲವರಲ್ಲಿ ಪುಳಕಕ್ಕೆ ಕಾರಣವಾಗಿರಬಹುದು. ಇದನ್ನು ದಿಟ್ಟ ನಿರ್ಧಾರ ಎಂದು ಶ್ಲಾಘಿಸಿದವರೂ ಇದ್ದಾರೆ. ಆದರೆ ಮತ್ತೊಂದೆಡೆ ಇದು ಅಸಮರ್ಥನೀಯ ಎಂದು ವಾದಿಸುವವರೂ ಇದ್ದಾರೆ. ವಾಸ್ತವವಾಗಿ ನಿಮ್ಮ ನಿರ್ಧಾರ, ನೀವು ಯಾವ ವರ್ಗದಲ್ಲಿ ಸೇರಿದ್ದೀರಿ ಎನ್ನುವುದನ್ನು ಅವಲಂಬಿಸಿದೆ.
ಇದೀಗ ಸರಕಾರದ ದೃಷ್ಟಿಕೋನವನ್ನು ಪರಿಶೀಲಿಸೋಣ. ಇದರ ಮುಖ್ಯ ಉದ್ದೇಶ ಕಪ್ಪುಹಣ ದಂಧೆ ವಿರುದ್ಧದ ಹೋರಾಟ. ಅಂದರೆ ಯಾವ ಮೂಲ ದಿಂದ ಈ ನೋಟುಗಳು ಬಂದವು ಎಂದು ಸಮರ್ಥಿಸಿ ಕೊಳ್ಳಲಾಗದವರನ್ನು ಇಕ್ಕಟ್ಟಿಗೆ ಸಿಲುಕಿಸುವುದು. ಎರಡನೆಯದಾಗಿ ಕಳ್ಳನೋಟು ಚಲಾವಣೆ ದಂಧೆಗೆ ಕಡಿವಾಣ ಹಾಕುವುದು. ಆಳವಾಗಿ ಬೇರೂರಿರುವ ಈ ದಂಧೆ ನಿಯಂತ್ರಿಸಲು ಇರುವ ಏಕೈಕ ಸರ್ಜಿಕಲ್ ದಾಳಿ ವಿಧಾನ ಇದು. ಈ ಎರಡು ಮೂಲ ಉದ್ದೇಶಗಳನ್ನು ಈಡೇರಿಸುವುದು ಈ ಮಹತ್ವಾಕಾಂಕ್ಷಿ ಯೋಜನೆಯ ಮುಖ್ಯ ಉದ್ದೇಶ. ಆದರೆ ಈ ರೀತಿಯಲ್ಲಿ ಇದು ಕಾರ್ಯನಿರ್ವಹಿಸಬಹುದೇ?
ಕಪ್ಪುಹಣ ವಿಚಾರದಲ್ಲಿ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊ ಳ್ಳಬಹುದು. ಏಕೆಂದರೆ, ಕಾಳಧನ ಹೊಂದಿರುವವರು ತಾವು ಹೊಂದಿರುವ ಅಘೋಷಿತ ಮೂಲಗಳ ಮೊತ್ತವನ್ನು ಪರಿವರ್ತಿಸುವುದು ಕಷ್ಟ. ಹಾಗೆ ಮಾಡಿದಲ್ಲಿ ವಿಚಾರಣೆಗೆ ಗುರಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ಆದ್ದರಿಂದ ಮೂರನೆ ವ್ಯಕ್ತಿಯ ಮೂಲಕ ಇದನ್ನು ಪರಿವರ್ತಿ ಸುವಂತೆ ಮಾಡುವುದು ಕಾರ್ಯಸಾಧುವಲ್ಲ. ಆದರೆ ಕುತೂಹಲಕಾರಿ ಅಂಶವೆಂದರೆ, 500 ಮತ್ತು 2000ರೂ. ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಲಾಗಿದೆ. ಅಂದರೆ ಕೇವಲ ಕಡಿಮೆ ವೌಲ್ಯದ ನೋಟುಗಳನ್ನು ಮಾತ್ರ ಚಲಾವಣೆಯಲ್ಲಿ ಉಳಿಸುವ ವ್ಯವಸ್ಥೆಗೆ ನಾವು ಹೋಗುವುದಿಲ್ಲ. ಅಧಿಕ ವೌಲ್ಯದ ಹಳೆ ನೋಟುಗಳ ಜಾಗವನ್ನು ಹೊಸ ನೋಟುಗಳು ಆಕ್ರಮಿಸಿಕೊಳ್ಳುತ್ತವೆ ಎನ್ನುವುದಷ್ಟೇ ವ್ಯತ್ಯಾಸ. ಈ ಅವಳಿ ಸಮಸ್ಯೆಗಳು ಬಹು ಅಪಾಯಕಾರಿ ಪರಿಸ್ಥಿತಿಗೆ ಕಾರಣವಾಗಬಹುದು.
ಕಾಳ ಆರ್ಥಿಕತೆ ರಾತ್ರೋರಾತ್ರಿ ಸೃಷ್ಟಿಯಾಗುವುದಿಲ್ಲ. ಅದು ಬೆಳೆಯಲು ಸಾಕಷ್ಟು ಸಮಯಾವಕಾಶ ಬೇಕು. ಆದ್ದರಿಂದ ಹೊಸ ಮುಖಬೆಲೆಯ ನೋಟುಗಳಿಂದ ಕಾಳ ಆರ್ಥಿಕತೆ ಸೃಷ್ಟಿಯಾಗುವುದಿಲ್ಲ ಎಂಬ ಖಾತ್ರಿಯೇನೂ ಇಲ್ಲ. ಎರಡನೆಯದಾಗಿ ಕಳ್ಳನೋಟು ಚಲಾವಣೆ ವಿಚಾರಕ್ಕೆ ಬಂದರೆ ಹೊಸ ನೋಟುಗಳ ನಕಲಿ ನೋಟುಗಳು ಸೃಷ್ಟಿಯಾಗುವುದಿಲ್ಲ ಎಂದು ನಂಬುವುದು ಹೇಗೆ? ಸಹಜವಾಗಿಯೇ ಇದರ ಮೇಲೆ ಯಾರಿಗೂ ನಿಯಂತ್ರಣ ಇಲ್ಲ. ಆದರೆ ಇಂಥ ಪ್ರಯತ್ನ ಆರಂಭವಾಗಿರುವುದರಿಂದ ಈ ನಿರ್ಧಾರ ಅಷ್ಟರ ಮಟ್ಟಿಗೆ ಶ್ಲಾಘನೀಯ.
ಕಪ್ಪುಹಣದ ವಿಚಾರದಲ್ಲಿ 500 ಮತ್ತು 1000 ರೂ. ವೌಲ್ಯದ ನೋಟುಗಳ ಪಾತ್ರ ಮಹತ್ವದ್ದೇ ಎನ್ನುವುದು ಸಹಜವಾಗಿ ಉದ್ಭವಿಸುವ ಪ್ರಶ್ನೆ. ಏಕೆಂದರೆ ಅಧಿಕ ವೌಲ್ಯ ಎನಿಸಿಕೊಂಡ 1000 ರೂ. ನೋಟು ಒಂದು ತಿಂಗಳ ಕಾಲ ಹಾಲು ಪಡೆಯಲೂ ಸಾಕಾಗದು. ಅಂತೆಯೇ ಕೆಲವು ಕೆ.ಜಿ. ಬೇಳೆ ಹಾಗೂ ಖಾದ್ಯ ತೈಲ ಖರೀದಿಸಿದರೆ 500 ರೂ.ಖರ್ಚಾಗುತ್ತದೆ. ಆದ್ದರಿಂದ ಬಹುತೇಕ ಕುಟುಂಬಗಳಲ್ಲಿ ಇಂಥ ಕರೆನ್ಸಿ ನೋಟುಗಳಿದ್ದು, ವಾಸ್ತವವಾಗಿ ಕಪ್ಪುಹಣ ಹೊಂದಿರುವವರು ಹಾಗೂ ನೈಜ ಹಣ ಹೊಂದಿರುವವರನ್ನು ಪ್ರತ್ಯೇಕಿಸುವುದು ಕಷ್ಟ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದರೆ, ಎಲ್ಲ ಕುಟುಂಬಗಳೂ, ಅದರಲ್ಲೂ ಮುಖ್ಯವಾಗಿ ಹಿರಿಯ ನಾಗರಿಕರು ಇರುವ ಕುಟುಂಬಗಳು ಕನಿಷ್ಠ 3-5 ಲಕ್ಷ ರೂಪಾಯಿಗಳನ್ನು ತುರ್ತು ಸಂದರ್ಭಕ್ಕಾಗಿ ನಗದು ರೂಪದಲ್ಲಿ ಇಟ್ಟು ಕೊಂಡಿರುತ್ತವೆ. ಏಕೆಂದರೆ ತುರ್ತು ವೈದ್ಯಕೀಯ ಅಗತ್ಯದ ಸಂದಭರ್ಗಳಲ್ಲಿ ನಗದು ರೂಪದಲ್ಲಿ ಆಸ್ಪತ್ರೆಗಳಲ್ಲಿ ಹಣ ನೀಡಬೇಕಾಗುತ್ತದೆ.
ಇದೀಗ ಐದು ಲಕ್ಷ ರೂಪಾಯಿಯನ್ನು ಬ್ಯಾಂಕ್ ಖಾತೆಗೆ ಪಾವತಿ ಮಾಡುವ ಹಿರಿಯ ನಾಗರಿಕರು ಹಾಗೂ ಭೂ ವ್ಯವಹಾರದಲ್ಲಿ ತೊಡಗಿಸಿಕೊಂಡ ವ್ಯಕ್ತಿಯೊಬ್ಬ ಬ್ಯಾಂಕಿಗೆ ಐದು ಲಕ್ಷ ರೂಪಾಯಿ ಪಾವತಿಸುವುದನ್ನು ಆದಾಯ ತೆರಿಗೆ ಇಲಾಖೆ ಹೇಗೆ ವಿಭಾಗಿಸುತ್ತದೆ? ಇದುವರೆಗಿನ ಅನುಭವದಂತೆ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ಹಣವನ್ನು ಖಾತೆಗೆ ಪಾವತಿ ಮಾಡಿದ ಎಲ್ಲರಿಗೂ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸುತ್ತದೆ. ಇದು ಸಹಜವಾಗಿಯೇ ಅನಗತ್ಯ ಕಿರುಕುಳಕ್ಕೆ ಕಾರಣವಾಗುತ್ತದೆ. ಹೀಗೆ ಖಾತೆಗೆ ಪಾವತಿ ಮಾಡಿದ ಹಣವನ್ನು ಮರಳಿ ಪಡೆಯಲು ಸರಕಾರ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ಮನೆಯಲ್ಲಿ ಅಷ್ಟೊಂದು ದೊಡ್ಡ ಮೊತ್ತದ ಹಣ ಮತ್ತೆ ಕೂಡಿಡಬೇಕಾದರೆ ಹಲವು ಬಾರಿ ವಹಿವಾಟು ನಡೆಸಬೇಕಾಗುತ್ತದೆ. ಈ ವಿಷಯವನ್ನು ಸರಕಾರ ಪರಿಗಣಿಸಿದಂತೆ ಕಾಣುತ್ತಿಲ್ಲ.
ಇಲ್ಲಿ ಇನ್ನೊಂದು ಮಹತ್ವದ ಅಂಶವೆಂದರೆ ಎಲ್ಲಾ ಜನರು ಬ್ಯಾಂಕ್ ಖಾತೆ ಗಳನ್ನು ಹೊಂದಿಲ್ಲ. ಹಾಗಾದರೆ ಅವರು ಇಂಥ ಅಧಿಕ ವೌಲ್ಯದ ನೋಟು ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಲು ಹೇಗೆ ಸಾಧ್ಯ? ಸರಕಾರ ಇದೀಗ ಜನಧನ್ ಯೋಜನೆ ಜಾರಿಗೆ ತಂದಿದ್ದು, ಇದು ಸ್ವಲ್ಪಮಟ್ಟಿಗೆ ನೆರವಿಗೆ ಬರಬ ಹುದು. ಆದರೆ ಈ ಯೋಜನೆಯಿಂದ ಹೊರಗೆ ಉಳಿದವರಿಗೆ ಸಹಜವಾ ಗಿಯೇ ಸಮಸ್ಯೆ ಎದುರಾಗುತ್ತದೆ. ಎರಡನೆಯದಾಗಿ ಗವಾಕ್ಷಿಯನ್ನು ತೀರಾ ಅಲ್ಪಾವಧಿಗೆ ಮುಕ್ತವಾಗಿರಿಸಲಾಗಿದೆ. ಇದನ್ನು ಎಲ್ಲರಿಗೆ ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಜನತೆಗೆ ವಿವರಿಸಬೇಕಾಗಿದೆ. ಸಾಮಾನ್ಯವಾಗಿ ರೈತರು ಇಂದಿಗೂ ನಗದಿನಲ್ಲೇ ವ್ಯವಹರಿಸುವುದು ರೂಢಿ. ಇಂಥವರಿಗೆ ಈ ಅಲ್ಪಾವಧಿಯಲ್ಲಿ ತಾವು ಹೊಂದಿದ ಅಧಿಕ ವೌಲ್ಯದ ನೋಟುಗಳನ್ನು ಬ್ಯಾಂಕಿಗೆ ವಿನಿಮಯ ಮಾಡಿಕೊಳ್ಳದಿದ್ದರೆ, ಅದು ಕೇವಲ ಕಾಗದದ ಚೂರು ಎನ್ನುವುದನ್ನು ಮನವರಿಕೆ ಮಾಡುವುದು ಕಷ್ಟ. ಇಂಥ ಸರ್ಜಿಕಲ್ ದಾಳಿಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸದಿದ್ದರೆ, ಈ ವರ್ಗಕ್ಕೆ ಅದು ಭಯಾನಕ ಯೋಜನೆಯಾಗುತ್ತದೆ. ಮೂರನೆ ಅಂಶವೆಂದರೆ, ಇಂಥ ಒತ್ತಡವನ್ನು ನಮ್ಮ ವ್ಯವಸ್ಥೆ ತಾಳಿಕೊಳ್ಳಲು ಸಾಧ್ಯವೇ ಎನ್ನುವುದು. ಇಂಥ ಹಣ ವಿನಿಮಯಕ್ಕೆ ಬರುವ ಗ್ರಾಹಕರಿಗೆ ಹಣ ನೀಡಲು ಬ್ಯಾಂಕುಗಳು ವಿಫಲವಾದರೆ ಖಂಡಿತವಾಗಿಯೂ ಅರಾಜಕತೆಯ ವಾತಾವರಣ ಸೃಷ್ಟಿಯಾಗಲಿದೆ. ಎಟಿಎಂಗಳು ಧ್ವಂಸವಾಗುವ ಸಾಧ್ಯತೆಯೂ ಇಲ್ಲದಿಲ್ಲ. ಈ ಬಗ್ಗೆ ಸರಕಾರ ಯೋಚಿಸಿದೆಯೇ?
ಈ ನೋಟುಗಳನ್ನು ಹಠಾತ್ತನೆ ಚಲಾವಣೆಯಿಂದ ತೆಗೆದಿರುವುದರಿಂದ ಹಾಗೂ ಹಣ ಪಡೆಯುವುದರ ಮೇಲೆ ನಿರ್ಬಂಧ ಇರುವುದರಿಂದ, ನಗದು ರೂಪಾಂತರದಲ್ಲಿ ಸಣ್ಣ ವ್ಯತ್ಯಯವಾದರೂ, ಅಂಗಡಿಗಳು, ಔಷಧ ಮಳಿಗೆಗಳು, ಚಿಲ್ಲರೆ ವ್ಯಾಪಾರಿಗಳು ಅಧಿಕ ವೌಲ್ಯದ ನೋಟುಗಳನ್ನು ಸ್ವೀಕರಿಸದೆ ಹಿಂಸೆಗೆ ತಿರುಗುವ ಅಪಾಯವೂ ಇದೆ. ಇದು ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದ್ದು, ಬ್ಯಾಂಕುಗಳ ಆಕ್ರೋಶಕ್ಕೆ ಗುರಿಯಾಗುವ ಅಪಾಯ ಇದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಬ್ಯಾಂಕುಗಳಿಗೆ ಅನಿವಾರ್ಯವಾಗುತ್ತದೆ. ನಾಲ್ಕನೆಯದಾಗಿ ಸರಕಾರಿ ವಲಯದ ರಸ್ತೆ ಸಾರಿಗೆ, ರೈಲ್ವೆ, ಟ್ಯಾಕ್ಸಿ, ಆಟೊ ರಿಕ್ಷಾ ವಲಯಗಳಲ್ಲಿ ಕಾರ್ಡ್‌ಗಳ ಬಳಕೆಗೆ ಅಗತ್ಯ ಮೂಲಸೌಕರ್ಯವನ್ನು ಇನ್ನೂ ಅಭಿವೃದ್ಧಿಪಡಿಸಿಲ್ಲ. ಸಾಮಾನ್ಯವಾಗಿ ಒಂದು ಕುಟುಂಬ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಬೆಳೆಸುವುದಾದರೆ ಕನಿಷ್ಠ 500 ರೂ. ಬೇಕಾಗುತ್ತದೆ. ಹೊಸ ವಿಧಾನ ಈ ಹಿನ್ನೆಲೆಯಲ್ಲೂ ಹಲವು ಸಮಸ್ಯೆಗಳನ್ನು ಸೃಷ್ಟಿಸಲಿದೆ.
ಇದು ಆರ್ಥಿಕತೆಗೆ ಉತ್ತೇಜನ ನೀಡಬಲ್ಲುದೇ? ಆರ್ಥಿಕತೆಗೆ ಕಪ್ಪು ಹಣದ ಮೊತ್ತವನ್ನು ಹೊರತುಪಡಿಸಿದರೆ ಹಣ ಪೂರೈಕೆಯಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಜಿಡಿಪಿ ಅಂಶಗಳಿಗೆ ಬಳಕೆಯಾಗುವ ಕಪ್ಪು ಹಣದ ಪ್ರಮಾಣ ಕಡಿಮೆಯಾಗುವುದರಿಂದ ಜಿಡಿಪಿ ದರ ಕಡಿಮೆಯಾಗಬಹುದು. ಸದ್ಯಕ್ಕೆ ಇದು ಪ್ರಮುಖ ಸಮಸ್ಯೆ ಅಲ್ಲದಿದ್ದರೂ ಬೇಡಿಕೆ ಆಧರಿತ ಹಣದುಬ್ಬರದಲ್ಲೂ ವ್ಯತ್ಯಯ ಉಂಟಾಗಬಹುದು. ಆದ್ದರಿಂದ ಆರ್ಥಿಕ ಪರಿಣಾಮಗಳು ಸಮ್ಮಿಶ್ರವಾಗಿರುತ್ತವೆ.
ಈ ಯೋಚನೆ ಪ್ರಗತಿಪರವಾಗಿದ್ದರೂ, ಇದನ್ನು ಅನುಷ್ಠಾನಕ್ಕೆ ತರುವಲ್ಲಿ ನಾವು ತರಾತುರಿಯ ನಿರ್ಧಾರ ಕೈಗೊಂಡಿದ್ದೇವೆ. ಶ್ರೀಮಂತ ವರ್ಗಕ್ಕೆ ಇದರಿಂದ ಯಾವ ತೊಂದರೆಯೂ ಆಗದು. ಏಕೆಂದರೆ ಅವರು ಕಾರ್ಡ್‌ಗಳನ್ನು ಬಳಕೆ ಮಾಡುತ್ತಾರೆ. ಆದರೆ ಮಧ್ಯಮ ವರ್ಗ, ಕಡಿಮೆ ಆದಾಯದ ಗುಂಪುಗಳು ಹಾಗೂ ಹಿರಿಯ ನಾಗರಿಕರು ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಈ ವರ್ಗದವರು ಸರಿಯಾದ ವಿನಿಮಯ ಪಡೆಯಲು ಹಾಗೂ ತೆರಿಗೆ ಅಧಿಕಾರಿಗಳ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ. ಅಂತಿಮವಾಗಿ ಹಲವು ಮಂದಿಗೆ ಈ ಬಗ್ಗೆ ಅರಿವು ಇಲ್ಲದೆ ಅವರು ವಿನಿಮಯಕ್ಕಾಗಿ ಬ್ಯಾಂಕುಗಳಿಗೆ ಹೋಗದಿರುವ ಸಾಧ್ಯತೆ ಇದೆ. ಇನ್ನು ಕೆಲವರು ನಿಯಮಿತ ವಿನಿಮಯಕ್ಕೆ ಅಗತ್ಯವಾದ ಗುರುತಿನ ಚೀಟಿ ಹೊಂದಿಲ್ಲದಿರಬಹುದು. ಇಂಥವರು ಖಂಡಿತವಾಗಿಯೂ ಸಮಾಜದ ದುರ್ಬಲ ವರ್ಗದವರು. ಈ ಎಲ್ಲ ಅಂಶಗಳನ್ನು ಪರಿಗಣಿಸಿದರೆ, ವಿತ್ತೀಯ ಸೇರ್ಪಡೆ ಮೂಲಕ ಯಾರ ಹಿತರಕ್ಷಣೆ ಮಾಡಬೇಕು ಎಂದು ಸರಕಾರ ಬಯಸಿದೆಯೋ ಅಂತಿಮವಾಗಿ ತೊಂದರೆಗೀಡಾಗುವುದು ಇದೇ ವರ್ಗ.
(ಲೇಖಕರು, ಸಿಎಆರ್‌ಇ ರೇಟಿಂಗ್ಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ. ಅಭಿಪ್ರಾಯಗಳು ಅವರ ವೈಯಕ್ತಿಕ)





