ಹೈಕೋರ್ಟ್ ಸಂಚಾರಿ ಪೀಠ ಪ್ರಾರಂಭಿಸುವಂತೆ ಒತ್ತಾಯಿಸಿ ನಾಳೆ ಧರಣಿ
ಮಂಗಳೂರು, ನ. 9: ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ಸಂಚಾರಿ ಪೀಠವನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ನ.11ರಂದು ಪೂರ್ವಾಹ್ನ 11 ಗಂಟೆಗೆ ಮಂಗಳೂರು ಕೋರ್ಟ್ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಗರದ ಎಲ್ಲ ವಕೀಲರು, ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಬೇಡಿಕೆಗೆ ಸ್ಪಂದಿಸುವಂತೆ ಸ್ಥಳೀಯ ಜನಪ್ರತಿನಿಧಿಗಳ ಗಮನಸೆಳೆಯಲು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಡುಬಡವನಿಗೂ ನ್ಯಾಯ ದೊರಕುವಂತಾಗಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಆದರೆ ಪ್ರಸ್ತುತ ಶೇ.70 ಮಂದಿ ತಾಲೂಕು ಮಟ್ಟದ ಕೋರ್ಟನ್ನು ಹೊರತುಪಡಿಸಿದರೆ ಮೇಲ್ಮಟ್ಟದ ಕೋರ್ಟ್‌ಗಳ ಸಂಪರ್ಕದಿಂದ ದೂರವುಳಿದಿದ್ದು ಶ್ರೀಮಂತ ವರ್ಗಕ್ಕೆ ಮಾತ್ರ ವ್ಯವಸ್ಥೆ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಉಡುಪಿ, ಕೊಡಗು, ದ.ಕ. ಜಿಲ್ಲೆಗಳ ಜನಸಾಮಾನ್ಯರಿಗೆ ನೂತನ ಸಂಚಾರಿ ಪೀಠ ಸ್ಥಾಪನೆಯಿಂದ ನ್ಯಾಯಾಂಗ ವ್ಯವಸ್ಥೆ ಸುಲಭವಾಗಿ ದೊರಕುವಂತಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಲ್ಯಾಣ ನಿಧಿ ಏರಿಕೆಗೆ ಆಗ್ರಹ: ರಾಜ್ಯ ವಕೀಲರ ಪರಿಷತ್‌ನಿಂದ ದೊರೆಯುವ ವಕೀಲರ ಕಲ್ಯಾಣ ನಿಧಿಯನ್ನು 10 ಲಕ್ಷ ರೂ.ಗೆ ಏರಿಸಬೇಕು. ಹಾಲಿ ಇರುವ ಪದ್ದತಿಯನ್ನು ತೆಗೆಯಬೇಕು. ಕಾನೂನು ಪದವೀಧರಿಗೆ ನೀಡುವ ಪ್ರೋತ್ಸಾಹ ಧನವನ್ನು 3 ಸಾವಿರ ರೂ. ಗೆ ಮತ್ತು ಅವಧಿಯನ್ನು 3 ವರ್ಷಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್.ವಿ., ಜೊತೆ ಕಾರ್ಯದರ್ಶಿ ಸುಮನಾ ಶರಣ್ ಹಾಗೂ ಕೋಶಾಧಿಕಾರಿ ಯತೀಶ್ ಕುಮಾರ್ ಉಪಸ್ಥಿತರಿದ್ದರು.







