ಇಲ್ಲಿವೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ರಿಸರ್ವ್ ಬ್ಯಾಂಕ್ ಉತ್ತರ
500 ಹಾಗೂ 1000 ರೂ. ನೋಟು ಚಲಾವಣೆ ಸ್ಥಗಿತ

♦ ಯೋಜನೆ ಏಕೆ?
ದೇಶದಲ್ಲಿ ಅಧಿಕ ವೌಲ್ಯದ ನೋಟುಗಳನ್ನು ಹೋಲುವ ಕಳ್ಳನೋಟು ಚಲಾವಣೆ ಮಿತಿಮೀರಿದೆ. ಕಳ್ಳನೋಟುಗಳು ಯಾವುದೇ ಭದ್ರತಾ ಲಕ್ಷಣಗಳನ್ನು ಅನುಕರಿಸದಿದ್ದರೂ, ಜನಸಾಮಾನ್ಯರಿಗೆ ಕಳ್ಳನೋಟುಗಳು ಕೂಡಾ ನೈಜ ಕರೆನ್ಸಿ ನೋಟುಗಳಂತೆ ಕಾಣುತ್ತವೆ. ಕಳ್ಳನೋಟುಗಳನ್ನು ದೇಶವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಅಧಿಕ ವೌಲ್ಯದ ನೋಟುಗಳನ್ನು ಭಯೋತ್ಪಾದಕರು ಹಾಗೂ ಕಪ್ಪುಹಣ ಹೊಂದಿರುವವರು ದುರುಪಯೋಗ ಮಾಡಿಕೊಳ್ಳುತ್ತಾರೆ. ಭಾರತ ಇಂದಿಗೂ ನಗದು ವಹಿವಾಟಿನ ಆರ್ಥಿಕತೆಯಾಗಿ ಉಳಿದಿರುವುದರಿಂದ ಇಂಥ ಕಳ್ಳನೋಟು ಚಲಾವಣೆ ದಂಧೆ ಹೆಚ್ಚುತ್ತಿದೆ. ಕಾಳಧನ ತಡೆ ಮತ್ತು ಕಳ್ಳನೋಟು ದಂಧೆಗೆ ಕಡಿವಾಣ ಹಾಕುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ.
♦ ಯೋಜನೆ ಏನು?
500 ಹಾಗೂ 1000 ರೂಪಾಯಿ ವೌಲ್ಯದ ನೋಟುಗಳನ್ನು ಕಾನೂನುಬದ್ಧ ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗಿದೆ. ಇದರ ಪರಿಣಾಮವಾಗಿ ಹಳೆಯ ಅಧಿಕ ವೌಲ್ಯದ ನೋಟುಗಳನ್ನು ಯಾವುದೇ ವಹಿವಾಟಿಗೆ ಬಳಸುವಂತಿಲ್ಲ. ಇದನ್ನು ಸಂಗ್ರಹಿಸಿ ಇಟ್ಟರೂ ಇದಕ್ಕೆ ಯಾವ ವೌಲ್ಯವೂ ಇಲ್ಲ. ಈ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಯಾವುದೇ 19 ಕಚೇರಿಗಳಲ್ಲಿ ಅಥವಾ ಯಾವುದೇ ಬ್ಯಾಂಕ್ ಶಾಖೆಗಳಲ್ಲಿ ಇಲ್ಲವೇ ಮುಖ್ಯ ಅಂಚೆ ಕಚೇರಿ ಅಥವಾ ಉಪ ಅಂಚೆ ಕಚೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದಾಗಿದೆ.
♦ ಎಷ್ಟು ವೌಲ್ಯ ಸಿಗುತ್ತದೆ?
ಬ್ಯಾಂಕ್ ಶಾಖೆ ಅಥವಾ ಆರ್‌ಬಿಐ ಕಚೇರಿಗಳಲ್ಲಿ ಇವುಗಳನ್ನು ನೀಡಿದರೆ ನಿಮಗೆ ಸಂಪೂರ್ಣ ವೌಲ್ಯ ಸಿಗುತ್ತದೆ.
♦ ನಗದುರೂಪದಲ್ಲಿ ಪಡೆಯಬಹುದೇ?
ಇಲ್ಲ. ಎಷ್ಟೇ ವೌಲ್ಯದ ನೋಟು ವಿನಿಮಯ ಮಾಡಿದರೂ, 4,000 ರೂಪಾಯಿ ಮಾತ್ರ ನಗದು ರೂಪದಲ್ಲಿ ಸಿಗುತ್ತದೆ. ಉಳಿದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
♦ ನಾನು ಬ್ಯಾಂಕಿನಲ್ಲಿ ನೀಡಿದ ಸಂಪೂರ್ಣ ಮೊತ್ತಕ್ಕೆ ಪ್ರತಿಯಾಗಿ ನನಗೆ ಸಂಪೂರ್ಣ ನಗದು ಏಕೆ ಸಿಗುವುದಿಲ್ಲ?
ಈ ಯೋಜನೆಯ ಉದ್ದೇಶದ ಹಿನ್ನೆಲೆಯಲ್ಲಿ ಸಂಪೂರ್ಣ ವಾಗಿ ನಗದು ರೂಪದಲ್ಲಿ ಪಡೆಯಲು ಅವಕಾಶ ಇಲ್ಲ.
♦ ನನ್ನ ಅಗತ್ಯತೆಗೆ 4 ಸಾವಿರ ರೂ.ಸಾಲದು. ನಾನೇನು ಮಾಡಬೇಕು?
ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಇತರ ಪಾವತಿಗೆ ಬಳಸಿಕೊಳ್ಳಬಹುದು. ಇದನ್ನು ಚೆಕ್ ರೂಪದಲ್ಲಿ ಇಲ್ಲವೇ ಇಲೆಕ್ಟ್ರಾನಿಕ್ ವರ್ಗಾವಣೆ ವಿಧಾನಗಳಾದ ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್, ಐಎಂಪಿಎಸ್, ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಬಹುದಾಗಿದೆ.
♦ ನಾನು ಬ್ಯಾಂಕ್ ಖಾತೆ ಹೊಂದಿಲ್ಲದಿದ್ದರೆ?
ನೀವು ತಕ್ಷಣ ಪಕ್ಕದ ಬ್ಯಾಂಕಿಗೆ ತೆರಳಿ, ಕೆವೈಸಿ ಅಗತ್ಯತೆಗಳಿಗೆ ಬೇಕಾದ ದಾಖಲೆಗಳನ್ನು ಸಲ್ಲಿಸಿ ಬ್ಯಾಂಕ್ ಖಾತೆ ಆರಂಭಿಸಲೇಬೇಕು.
♦ ನಾನು ಕೇವಲ ಜನಧನ್ ಯೋಜನೆ ಖಾತೆಯನ್ನು ಮಾತ್ರ ಹೊಂದಿದ್ದರೆ?
ಜೆಡಿವೈ ಖಾತೆದಾರರು ಕೂಡಾ ನಿಗದಿತ ಮಿತಿಗೆ ಅನುಗುಣವಾಗಿ ಹಾಗೂ ವಿಧಿವಿಧಾನಗಳ ಅನುಸಾರ ವಿನಿಮಯ ಸೌಲಭ್ಯವನ್ನು ಪಡೆಯಬಹುದು.
♦ ನೋಟುಗಳ ವಿನಿಮಯಕ್ಕೆ ನಾನು ಎಲ್ಲಿ ಹೋಗಬಹುದು?
ಈ ವಿನಿಮಯ ಸೌಲಭ್ಯವು ಎಲ್ಲ ಆರ್‌ಬಿಐ ಕಚೇರಿಗಳಲ್ಲಿ, ವಾಣಿಜ್ಯ ಬ್ಯಾಂಕ್ ಶಾಖೆಗಳಲ್ಲಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ರಾಜ್ಯ ಸಹಕಾರ ಬ್ಯಾಂಕ್ ಅಥವಾ ಮುಖ್ಯ ಅಂಚೆ ಕಚೇರಿ, ಉಪ ಅಂಚೆ ಕಚೇರಿಗಳಲ್ಲಿ ಲಭ್ಯವಿದೆ.
♦ ನಾನು ನನ್ನ ಬ್ಯಾಂಕ್ ಶಾಖೆಗೇ ಹೋಗಬೇಕೇ?
4,000 ರೂಪಾಯಿವರೆಗಿನ ವಿನಿಮಯಕ್ಕೆ ಯಾವುದೇ ಬ್ಯಾಂಕ್ ಶಾಖೆಗೆ ಹೋಗಿ ಅಧಿಕೃತ ಗುರುತಿನ ಚೀಟಿ ತೋರಿಸಿ ವಿನಿಮಯ ಮಾಡಿಕೊಳ್ಳಬಹುದು.
4,000 ರೂಪಾಯಿಗಿಂತ ಹೆಚ್ಚಿನ ವಿನಿಮಯದಲ್ಲಿ, ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತದೆ. ನೀವು ಖಾತೆ ಹೊಂದಿರುವ ಶಾಖೆಗೇ ತೆರಳಬೇಕು ಅಥವಾ ಅದೇ ಬ್ಯಾಂಕಿನ ಇತರ ಶಾಖೆಗಳಲ್ಲೂ ಈ ಸೌಲಭ್ಯ ಇದೆ.
ಒಂದು ವೇಳೆ ನೀವು ಖಾತೆ ಹೊಂದಿಲ್ಲದ ಇತರ ಬ್ಯಾಂಕಿನ ಶಾಖೆಗಳಿಗೆ ತೆರಳಿದರೆ, ನೀವು ಅಧಿಕೃತ ಗುರುತುಪತ್ರ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಆಗ ಇಲೆಕ್ಟ್ರಾನಿಕ್ ನಿಧಿ ವರ್ಗಾವಣೆ ಮೂಲಕ ನಿಮ್ಮ ಖಾತೆಗೆ ಹಣ ವರ್ಗಾಯಿಸಲಾಗುತ್ತದೆ.
♦ ನನ್ನ ಬ್ಯಾಂಕಿನ ಇತರ ಶಾಖೆಗಳಿಗೂ ನಾನು ಹೋಗಬಹುದೇ?
ಹೌದು. ನಿಮ್ಮ ಖಾತೆ ಇರುವ ಬ್ಯಾಂಕಿನ ಇತರ ಯಾವುದೇ ಶಾಖೆಗಳಲ್ಲೂ ನೀವು ವಿನಿಮಯ ಮಾಡಿಕೊಳ್ಳಬಹುದು.
♦ ನಾನು ಇತರ ಯಾವುದೇ ಬ್ಯಾಂಕಿನ ಶಾಖೆಗಳಿಗೆ ಹೋಗಬಹುದೇ?
ಹೌದು. ನೀವು ಇತರ ಯಾವುದೇ ಬ್ಯಾಂಕಿನ ಶಾಖೆಗಳಿಗೂ ಹೋಗಬಹುದು. ಅಂಥ ಪ್ರಕರಣದಲ್ಲಿ ನೀವು ಅಧಿಕೃತ ಗುರುತುಪತ್ರವನ್ನು ನಗದು ವಿನಿಮಯಕ್ಕೆ ನೀಡಬೇಕಾಗುತ್ತದೆ. 4,000 ರೂಪಾಯಿಗಿಂತ ಹೆಚ್ಚಿನ ಇಲೆಕ್ಟ್ರಾನಿಕ್ ನಿಧಿ ವರ್ಗಾವಣೆಯಾಗಬೇಕಿದ್ದರೆ, ಅಧಿಕೃತ ಗುರುತುಚೀಟಿಯ ಜತೆಗೆ, ಬ್ಯಾಂಕ್ ಖಾತೆ ವಿವರಗಳನ್ನೂ ನೀಡಬೇಕಾಗುತ್ತದೆ.
♦ ನನ್ನ ಖಾತೆ ಇಲ್ಲ. ಆದರೆ ನನ್ನ ಸಂಬಂಧಿಕರ/ ಸ್ನೇಹಿತರ ಖಾತೆ ಇದ್ದು, ಅಂಥ ಖಾತೆಗಳಿಗೆ ನಾನು ನನ್ನ ಹಣವನ್ನು ವಿನಿಮಯ ಮಾಡಬಹುದೇ?
ಹೌದು. ನಿಮ್ಮ ಸಂಬಂಧಿ ಅಥವಾ ಸ್ನೇಹಿತ ಅಂಥ ವರ್ಗಾವಣೆಗೆ ಲಿಖಿತ ಅನುಮತಿ ನೀಡಬೇಕಾಗುತ್ತದೆ. ನೀವು ಹೀಗೆ ವಿನಿಮಯ ಮಾಡುವಾಗ, ನೀವು ಬ್ಯಾಂಕಿಗೆ ಖಾತೆದಾರ ನೀಡಿರುವ ಅನುಮತಿಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಜತೆಗೆ ನಿಮ್ಮ ಅಧಿಕೃತ ಗುರುತಿನಪತ್ರವೂ ಕಡ್ಡಾಯ.







