ಲಿಂಗ ಪತ್ತೆ ಪ್ರಕರಣ ನಿಗಾಗೆ ಸಮಿತಿ ರಚಿಸಿ: ಹೈಕೋರ್ಟ್‌ಗಳಿಗೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ನ.10: ಪಿಎನ್‌ಡಿಟಿ ಕಾಯ್ದೆ ಅನ್ವಯ ಭ್ರೂಣ ಲಿಂಗ ನಿರ್ಧರಣೆ ಪರೀಕ್ಷೆ ನಿಷೇಧವನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸುಪ್ರೀಂಕೋರ್ಟ್ ಮುಂದಾಗಿದೆ. ಲಿಂಗಾನುಪಾತ ಕುಸಿಯುತ್ತಿರುವುದರಿಂದ ನಿರ್ಮಾಣವಾಗಿರುವ ಸಾಮಾಜಿಕ ಸನ್ನಿವೇಶವನ್ನು ಎದುರಿಸುವ ಸ್ಥಿತಿಯಲ್ಲಿ ಭಾರತ ಇಲ್ಲ. ಲಿಂಗಾನುಪಾತ ಕುಸಿತ ಸಮಾಜಕ್ಕೆ ತಗುಲಿದ ದೊಡ್ಡ ರೋಗ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಲಿಂಗಾನುಪಾತ ಕುಸಿತ ಸಾಮಾಜಿಕ ಅನಾಹುತಕ್ಕೆ ಕಾರಣವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು. ಲಿಂಗಾನುಪಾತ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಎಸ್.ಕೆ.ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ ಮಂಗಳವಾರ ತೀರ್ಪು ನೀಡಿದೆ.
ಈ ತೀರ್ಪಿನಲ್ಲಿ ಎಲ್ಲ ಹೈಕೋರ್ಟ್‌ಗಳಿಗೆ 16 ಸೂಚನೆಗಳನ್ನು ನೀಡಲಾಗಿದ್ದು, ಪಿಎಂಡಿಟಿ ಕಾಯ್ದೆ ಉಲ್ಲಂಘನೆಯ ಪ್ರಕರಣಗಳ ಪರಿಶೀಲನೆಗಾಗಿ ಹೈಕೋರ್ಟ್‌ಗಳಲ್ಲಿ ಮೂವರು ನ್ಯಾಯಮೂರ್ತಿಗಳ ಸಮಿತಿ ರಚಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ದಿಲ್ಲಿ (895), ಹರ್ಯಾಣ (880), ಒಡಿಶಾ (886) ಮತ್ತಿತರ ರಾಜ್ಯಗಳ ಲಿಂಗಾನುಪಾತದ ಬಗ್ಗೆ ಕೋರ್ಟ್ ಕಳವಳ ವ್ಯಕ್ತಪಡಿದೆ. ಲಿಂಗಾನುಪಾತ ಕುಸಿತ ಸಮಾಜಕ್ಕೆ ಅಂಟಿದ ರೋಗ ಎಂದು ಹೇಳಿದೆ.
ಲಿಂಗಾನುಪಾತನ ವಾಸ್ತವ ಚಿತ್ರಣ ದೊರೆಯುವಂತಾಗಲು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಎಲ್ಲ ನಾಗರಿಕ ನೋಂದಣಿಗಳ ಕೇಂದ್ರೀಯ ಮಾಹಿತಿ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಸೂಚಿಸಿದೆ. ಈ ಮೂಲಕ ಎಷ್ಟು ಹೆಣ್ಣುಮಕ್ಕಳು ಹಾಗೂ ಎಷ್ಟು ಗಂಡುಮಕ್ಕಳು ಹುಟ್ಟುತ್ತಾರೆ ಎಂಬ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಆದೇಶ ನೀಡಿದೆ.







