ನೋಟು ಬದಲಾಯಿಸುವವರು ಚಿನ್ನ ಎಷ್ಟಕ್ಕೆ ಖರೀದಿಸಿದರು ಗೊತ್ತೇ?

ಮೀರಠ್, ನ.10: ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದುಪಡಿಸಿದ ಹಿನ್ನೆಲೆಯಲ್ಲಿ ಎದ್ದಿರುವ ವದಂತಿಗಳ ಹಿನ್ನೆಲೆಯಲ್ಲಿ ಅಧಿಕ ಮೊತ್ತದ ನಗದು ಹೊಂದಿರುವವರು ಚಿನ್ನದ ಅಂಗಡಿಗಳಿಗೆ ಧಾವಿಸಿ ನೋಟುಗಳನ್ನು ಚಿನ್ನಕ್ಕೆ ವಿನಿಮಯ ಮಾಡಿಕೊಳ್ಳಲು ಹರಸಾಹಸ ಪಡುತ್ತಿರುವ ದೃಶ್ಯಗಳು ಕಂಡುಬಂದವು.
ದಿಲ್ಲಿ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತಿತರ ಕಡೆಗಳಲ್ಲಿ ಆಭರಣ ವ್ಯಾಪಾರಿಗಳು ತಡರಾತ್ರಿವರೆಗೂ ವಹಿವಾಟು ನಡೆಸಿದರು. ದಿಲ್ಲಿಯ ಗ್ರೀನ್‌ಪಾರ್ಕ್ ಬಡಾವಣೆಯ ಚಿನ್ನದ ಅಂಗಡಿಯೊಂದರ ಮುಂದೆ ರಾತ್ರಿ 11:50ರ ಸುಮಾರಿಗೂ ಸರದಿ ಸಾಲು ಇದ್ದುದು ಕಂಡುಬಂತು. ಮಳಿಗೆ ಮುಚ್ಚುವ ಸೂಚನೆ ಕಾಣಿಸಲಿಲ್ಲ.
ಆದರೆ ಚಲಾವಣೆ ರದ್ದಾದ ಹಣವನ್ನು ಸ್ವೀಕರಿಸಿದ್ದನ್ನು ಒಪ್ಪಿಕೊಳ್ಳಲು ಆಭರಣ ಮಳಿಗೆಗಳ ಮಾಲಕರು ನಿರಾಕರಿಸಿದರು. ಮೀರಠ್, ಆಗ್ರಾ, ಡೆಹ್ರಾಡೂನ್, ದಿಲ್ಲಿ ಮತ್ತಿತರ ಕಡೆಗಳಲ್ಲಿ ಚಿನ್ನದ ವ್ಯಾಪಾರಿಗಳು 10 ಗ್ರಾಂ ಚಿನ್ನವನ್ನು 50 ಸಾವಿರ ರೂಪಾಯಿವರೆಗೂ ಮಾರಾಟ ಮಾಡಿದ ಬಗ್ಗೆ ವರದಿಗಳು ಬಂದಿವೆ. ವಾಸ್ತವವಾಗಿ 10 ಗ್ರಾಂ ಚಿನ್ನದ ಬೆಲೆ 30 ಸಾವಿರ ರೂಪಾಯಿ ಇದ್ದರೆ, ಚಲಾವಣೆ ರದ್ದಾಗಿರುವ ನೋಟುಗಳನ್ನು ಸ್ವೀಕರಿಸಿ, 50 ಸಾವಿರದವರೆಗೂ ಮಾರಾಟ ಮಾಡಿದರು ಎನ್ನಲಾಗಿದೆ.
ಉತ್ತರಾಖಂಡದಲ್ಲಿ ಸಾಮಾನ್ಯವಾಗಿ ದಿನಕ್ಕೆ 4-5 ಕೆ.ಜಿ ಚಿನ್ನ ಮಾರಾಟವಾಗುತ್ತದೆ. ಆದರೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಇದಕ್ಕಿಂತ ಹಲವು ಪಟ್ಟು ಹೆಚ್ಚು ಚಿನ್ನ ಮಾರಾಟವಾಗಿರುವ ಸಾಧ್ಯತೆ ಇದ್ದು, ಎಷ್ಟು ಮಾರಾಟವಾಗಿದೆ ಎಂಬ ನಿಖರ ಅಂಕಿ ಅಂಶಗಳು ಲಭ್ಯವಾಗಿಲ್ಲ.







