ಜೆಎನ್‌ಯು ವಿದ್ಯಾರ್ಥಿ ನಜೀಬ್ ನಾಪತ್ತೆ: ಬಿಹಾರದಲ್ಲಿ ದಿಲ್ಲಿ ಪೊಲೀಸರು

ಹೊಸದಿಲ್ಲಿ, ನ.10: ಅಕ್ಟೋಬರ್ 15ರಂದು ದಿಲ್ಲಿ ಜೆಎನ್‌ಯು ವಿದ್ಯಾಥಿ ನಜೀಬ್ ಅಹ್ಮದ್ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ದಿಲ್ಲಿ ಪೊಲೀಸರು ಬಿಹಾರದ ದರ್ಬಾಂಗಕ್ಕೆ ಆಗಮಿಸಿದ್ದಾರೆ.
ನಾಪತ್ತೆಯಾಗುವ ಹಿಂದಿನ ದಿನ ರಾತ್ರಿ ನಜೀಬ್, ಕ್ಯಾಂಪಸ್‌ನಲ್ಲಿ ಕೆಲ ಎಬಿವಿಪಿ ಕಾರ್ಯಕರ್ತರ ಜತೆ ಜಗಳವಾಡಿದ್ದ ಎಂಬ ಮಾಹಿತಿಯನ್ನು ಪೊಲೀಸರು ಇದೀಗ ಬಾಯಿ ಬಿಟ್ಟಿದ್ದಾರೆ. "ನಜೀಬ್ ಬಗ್ಗೆ ಎಲ್ಲಿಂದ ಯಾವ ಮಾಹಿತಿ ಬಂದರೂ, ಅಲ್ಲಿಗೆ ಪೊಲೀಸ್ ತಂಡವನ್ನು ಕಳುಹಿಸಲಾಗುತ್ತಿದೆ. ಒಂದು ತಂಡ ಇದೀಗ ಬಿಹಾರದ ದರ್ಬಾಂಗಕ್ಕೆ ತೆರಳಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ದಿಲ್ಲಿ ಪೊಲೀಸರ ಇನ್ನೊಂದು ತಂಡ ಬಡಾನ್‌ಗೆ ತೆರಳಿದ್ದು, ನಜೀಬ್‌ಗೆ ಖಿನ್ನತೆ ಮತ್ತು ಒಬೆಸಿವ್ ಕಂಪಲ್ಸಿವ್ ಡಿಸ್‌ಆರ್ಡರ್ (ಒಸಿಡಿ)ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಜತೆ ಚರ್ಚಿಸುತ್ತಿದೆ. ಆದರೆ ನಜೀಬ್‌ಗೆ ಕೇವಲ ನಿದ್ರಾಹೀನತೆ (ಇನ್ಸೋಮ್ನಿಯಾ) ರೋಗ ಮಾತ್ರ ಇತ್ತು. ಬೇರಾವ ಮಾನಸಿಕ ವ್ಯತ್ಯಯವೂ ಇರಲಿಲ್ಲ ಎಂದು ಆತನ ಕುಟುಂಬದ ಸದಸ್ಯರು ಹೇಳಿಕೆ ನೀಡಿದ್ದಾರೆ.
"ನಜೀಬ್ 2012ರಿಂದಲೂ ತನ್ನ ಹುಟ್ಟೂರು ಬಡಾನ್‌ನಲ್ಲಿ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ. ಆತನ ವ್ಯಕ್ತಿತ್ವ, ನಡವಳಿಕೆ ಹಾಗೂ ಯೋಚನಾ ಲಹರಿ ಬಗ್ಗೆ ಮಾಹಿತಿ ಪಡೆಯಲು, ಆತನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಬಳಿ ಚರ್ಚಿಸಲಾಗುತ್ತಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಜೀಬ್ ಚಿಕಿತ್ಸೆ ಪಡೆಯುತ್ತಿರುವುದನ್ನು ಕುಟುಂಬದವರು ಹೇಳಿಲ್ಲವಾದರೂ, ನಜೀಬ್‌ನ ಹಾಸ್ಟೆಲ್ ಕೊಠಡಿಯಲ್ಲಿ ಸಿಕ್ಕಿದ ವೈದ್ಯಕೀಯ ಚೀಟಿಯ ಆಧಾರದಲ್ಲಿ ಪೊಲೀಸರು ವೈದ್ಯರನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಈ ಚೀಟಿಯ ಪ್ರಕಾರ, ನಜೀಬ್ ಗೆ ಖಿನ್ನತೆ ನಿರೋಧಕ ಔಷಧಿ ಹಾಗೂ ನಿದ್ದೆ ಔಷಧಿ ತೆಗೆದುಕೊಳ್ಳಲು ಸಲಹೆ ಮಾಡಲಾಗಿತ್ತು ಎಂದು ಅವರು ವಿವರಿಸಿದ್ದಾರೆ.







