ಆಗ ನಿರಾಶ್ರಿತೆ, ಈಗ ಜನಪ್ರತಿನಿಧಿ ಇಲ್ಹಾನ್ ಉಮರ್ !
ಪ್ರಪ್ರಥಮ ಸೊಮಾಲಿ ಅಮೆರಿಕನ್ ಮುಸ್ಲಿಂ ಮಹಿಳೆ

ವಾಷಿಂಗ್ಟನ್, ನ.10: ಒಂದೊಮ್ಮೆ ನಿರಾಶ್ರಿತೆಯಾಗಿದ್ದ ಇಲ್ಹಾನ್ ಉಮರ್ ಎಂಬ ಮಹಿಳೆ ಅಮೆರಿಕದ ಚುನಾವಣೆಯಲ್ಲಿ ಗೆದ್ದು ಜನಪ್ರತಿನಿಧಿಯಾದ ಪ್ರಪ್ರಥಮ ಸೊಮಾಲಿ ಅಮೆರಿಕನ್ ಮುಸ್ಲಿಂ ಮಹಿಳೆಯಾಗಿದ್ದಾಳೆ.
ಆಗಸ್ಟ್ ತಿಂಗಳಲ್ಲಿ ನಡೆದ ಪ್ರೈಮರಿ ಚುನಾವಣೆಯಲ್ಲಿ ಈಕೆ ಡೆಮಾಕ್ರೆಟಿಕ್ ಅಭ್ಯರ್ಥಿಯನ್ನು ಸೋಲಿಸಿದ್ದರು. ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ಆಕೆ ಮಿನಿಯಾ ಪೊಲೀಸ್ ರಾಜ್ಯದ ಹೆಚ್ಚಿನ ಪ್ರದೇಶಗಳನ್ನು ಪ್ರತಿನಿಧಿಸಲಿದ್ದಾರೆ.
ಉಮರ್ ಹುಟ್ಟಿದ್ದು ಸೊಮಾಲಿಯಾದಲ್ಲಿ.ನಾಲ್ಕು ವರ್ಷ ಕೀನ್ಯಾದ ನಿರಾಶ್ರಿತರ ಶಿಬಿರದಲ್ಲಿ ನೆಲೆಸಿ ನಂತರ ತನ್ನ 12ನೆ ವಯಸ್ಸಿನಲ್ಲಿ ಅಮೆರಿಕಕ್ಕೆ ವಲಸೆ ಬಂದಿದ್ದರು. ದೇಶದಲ್ಲಿರುವ ಧಾರ್ಮಿಕ ಅಸಹಿಷ್ಣುತೆ, ಆರ್ಥಿಕ ಅಸಮಾನತೆ ಹಾಗೂ ಜನಾಂಗೀಯ ಅಸಮಾನತೆಯಿಂದ ತಾನು ರೋಸಿ ಹೋಗಿದ್ದಾಗಿಯೂ ಆಕೆ ಹೇಳುತ್ತಾರೆ.
ಅಮೆರಿಕದಲ್ಲಿರುವ ಅಸಮಾನತೆಯೇ ಆಕೆ ಅಲ್ಲಿನ ರಾಜಕೀಯ ಕ್ಷೇತ್ರದಲ್ಲಿ ಧುಮುಕುವಂತೆ ಪ್ರೇರೇಪಿಸಿತ್ತು. ತನ್ನಂತೆ ಇರುವ ಹಲವರಿಗೆ ನ್ಯಾಯಕ್ಕಾಗಿ ಅವರು ಹೋರಾಡಲಾರಂಭಿಸಿದ್ದರು. 34 ವರ್ಷದ ಈಕೆ ಮೂರು ಮಕ್ಕಳ ತಾಯಿಯಾಗಿದ್ದಾರೆ. ಈಕೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ಮಂಡಿಸಲು ಉದ್ದೇಶಿಸಿರುವ ಪ್ರಥಮ ಮಸೂದೆಯು, ನಾಗರಿಕನೊಬ್ಬನು 18 ವರ್ಷ ತುಂಬಿದಾಗಲೇ ಆತನ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವಂತೆ ಅಥವಾ ಆತ ಯಾ ಆಕೆಗೆ ಚಾಲನಾ ಪರವಾನಿಗೆ ದೊರೆಯುವಂತೆ ಮಾಡುವ ಉದ್ದೇಶ ಹೊಂದಿದೆ.







