ಸೋತ ಬಳಿಕ ಗೆಲುವಿನ ಹಾದಿಯಲ್ಲಿ ಹಿಲರಿ ಕ್ಲಿಂಟನ್ !

ವಾಷಿಂಗ್ಟನ್, ನ.10: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸೋಲನ್ನನುಭವಿಸಿದ್ದರೂ ಆಕೆ ಜನಪ್ರಿಯತೆಯ ಜನಮತದಲ್ಲಿ (ಪಾಪ್ಯುಲಾರಿಟಿ ವೋಟ್) ಗೆಲುವು ಸಾಧಿಸುವ ಹಾದಿಯಲ್ಲಿದ್ದಾರೆ.
ಚುನಾವಣೆಗೆ ಎರಡು ದಿನಗಳಿರುವಾಗ, ರಿಪಬ್ಲಿಕನ್ ಅಭ್ಯರ್ಥಿ ಹಾಗೂ ಚುನಾವಣೆಯಲ್ಲಿ ಗೆದ್ದು ಈಗ ಅಮೆರಿಕಾದ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಅವರು ಟ್ವೀಟೊಂದನ್ನು ಮಾಡಿ ‘‘ಇಲೆಕ್ಟೋರಲ್ ಕಾಲೇಜ್ ಪ್ರಜಾಪ್ರಭುತ್ವಕ್ಕೆವಿನಾಶಕಾರಿ’’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈ ಇಲೆಕ್ಟೋರಲ್ ಕಾಲೇಜಿಲ್ಲದಿದ್ದರೆ ಟ್ರಂಪ್ ಪ್ರಾಯಶಃ ಗೆಲುವು ಸಾಧಿಸುತ್ತಿರಲಿಲ್ಲ.
ಚುನಾವಣೆ ನಡೆದ ಮರುದಿನ ಕ್ಲಿಂಟನ್ ಜನಪ್ರಿಯತೆಯ ಜನಮತದಲ್ಲಿ ಸಣ್ಣ ಮಟ್ಟದ ಮುನ್ನಡೆ ಸಾಧಿಸಿದ್ದರೆಂದು ದಿ ಅಸೋಸಿಯೇಟೆಡ್ ಪ್ರೆಸ್ ತಿಳಿಸಿದೆ. 125 ಮಿಲಿಯನ್ ಮತಗಳನ್ನು ಎಣಿಕೆ ಮಾಡಿದ್ದರೆ ಅವುಗಳಲ್ಲಿ ಕ್ಲಿಂಟನ್ ಶೇ 47.7 ಮತಗಳನ್ನು ಪಡೆದಿದ್ದರೆ, ಟ್ರಂಪ್ ಶೇ 47.5 ಮತಗಳನ್ನು ಪಡೆದಿದ್ದರು. ಇದನ್ನು ಪರಿಗಣನೆಗೆ ತೆಗೆದುಕೊಂಡರೆ ಹಿಲರಿಗೆ ಟ್ರಂಪ್ ಗಿಂತ 2.36 ಲಕ್ಷ ಅಧಿಕ ಮತಗಳು ಬಂದಿವೆ.
ಇನ್ನು ಉಳಿದಿರುವ ಮತಗಳು ಹೆಚ್ಚಾಗಿ ಡೆಮಾಕ್ರೆಟಿಕ್ ಪಕ್ಷ ಪ್ರಾಬಲ್ಯವಿರುವ ರಾಜ್ಯಗಳದ್ದಾಗಿರುವುದರಿಂದ ಕ್ಲಿಂಟನ್ ಅವರು ಪಾಪ್ಯುಲಾರಿಟಿ ವೋಟ್ ನಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಅಧಿಕವಾಗಿದ್ದು ಹಾಗೇನಾದರೂ ಆದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಹೊರತಾಗಿಯೂ ಜನಪ್ರಿಯತೆಯ ಜನಮತದಲ್ಲಿ ಗೆದ್ದ ಈ ಶತಮಾನದ ಪ್ರಥಮ ಅಧ್ಯಕ್ಷೀಯ ಅಭ್ಯರ್ಥಿ ಆಕೆಯಾಗಲಿದ್ದಾರೆ.
ಇನ್ನು ಎಣಿಕೆ ಮಾಡಲು ಉಳಿದಿರುವ ಮತಗಳು ಕ್ಯಾಲಿಫೋರ್ನಿಯಾ, ವಾಷಿಂಗ್ಟನ್, ನ್ಯೂಯಾರ್ಕ್ ಹಾಗೂ ಒರೆಗಾನ್ ಹಾಗೂ ಮೇರಿಲ್ಯಾಂಡ್ ರಾಜ್ಯಗಳದ್ದಾಗಿದ್ದು ಇಲ್ಲಿ ಕ್ಲಿಂಟನ್ ಅವರು ಗೆಲುವು ಸಾಧಿಸಿದ್ದಾರೆ.
ಅರಿಝೋನಾ ಹಾಗೂ ಅಲಾಸ್ಕದ ಮತಗಳು ಎಣಿಕೆ ಮಾಡಲು ಬಾಕಿಯಿದೆ. ಈ ರಾಜ್ಯಗಳು ರಿಪಬ್ಲಿಕನ್ ಪ್ರಾಬಲ್ಯ ಹೊಂದಿದ್ದರೂ ಇಲ್ಲಿರುವ ಮತಗಳ ಸಂಖ್ಯೆ ತೀರಾ ಕಡಿಮೆಯಾಗಿವೆ.







