ಟ್ರಂಪ್ ವಿಜಯಕ್ಕೆ ಕಾರಣ ಫೇಸ್ ಬುಕ್ !
ಪ್ರಜಾಪ್ರಭುತ್ವಕ್ಕೆ ಮಾರಕವೇ ಈ ‘ಫಿಲ್ಟರ್ ಬಬಲ್’ ?

ವಾಷಿಂಗ್ಟನ್, ನ.10: ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿರುವುದು ವಾಸ್ತವ. ಆದರೆ ಯಾರೂ ಊಹಿಸಲಸಾಧ್ಯವಾದ ರೀತಿಯಲ್ಲಿ ಟ್ರಂಪ್ ಹೇಗೆ ಗೆಲುವು ದಾಖಲಿಸಿದ್ದಾರೆಂದು ಹಲವರು ತಲೆ ಕೆರೆದುಕೊಳ್ಳಬಹುದು. ಆದರೆ ಅವರ ವಿಜಯಕ್ಕೆ ಫೇಸ್ ಬುಕ್ ಕಾರಣವೆಂದು ಕೆಲವರ ಅಭಿಪ್ರಾಯ. ಹೇಗಂತೀರಾ ?
ಫೇಸ್ ಬುಕ್ ಮತ್ತದರ ನ್ಯೂಸ್ ಫೀಡ್ ಹೇಗೆ ಕೆಲಸ ಮಾಡುತ್ತದೆಯೆಂದರೆ ಅದು ನಾವು ಲೈಕ್ ಮಾಡಿದ ವಿಚಾರಗಳನ್ನು ನಮಗೆ ತೋರಿಸುತ್ತದೆ. ಅಲ್ಲಿ ಅದು ಸತ್ಯ ಹಾಗೂ ಅಸತ್ಯದ ನಡುವಿನ ವ್ಯತ್ಯಾಸವನ್ನು ಗುರುತಿಸುವ ಕೆಲಸ ಮಾಡುವುದಿಲ್ಲ. ಇದನ್ನು ಎಲಿ ಪರಿಸರ್ ಎಂಬವರು ತಮ್ಮ 2011 ರ ಬೆಸ್ಟ್ ಸೆಲ್ಲರ್ ‘ದಿ ಫಿಲ್ಟರ್ ಬಬ್ಬಲ್ : ವಾಟ್ ದಿ ಇಂಟರ್ನೆಟ್ ಈಸ್ ಹೈಡಿಂಗ್ ಫ್ರಮ್ ಯು’ನಲ್ಲಿ ತಿಳಿಸಿದಂತೆ ‘ಫಿಲ್ಟರ್ ಬಬಲ್’ ಎನ್ನಲಾಗುತ್ತದೆ.
ಯಾರಾದರೂ ರಾಜಕಾರಣಿಯೊಬ್ಬರ ಕಥೆಯೊಂದನ್ನು ಶೇರ್ ಮಾಡಿದ್ದರೆ ಹಾಗೂ ಈ ಕಥೆನಿಮ್ಮ ಲೈಕ್ ಗೆ ಅನುಗುಣವಾಗಿದ್ದಲ್ಲಿ ಅದುಸುಳ್ಳಾಗಿದ್ದರೂ ನಿಮ್ಮ ನ್ಯೂಸ್ ಫೀಡ್ ನಲ್ಲಿ ಕಾಣುತ್ತದೆ. ಅದೇ ಸಮಯ ಆ ಕಥೆ ಸುಳ್ಳೆಂದು ವಾದಿಸುವ ಯಾವುದಾದರೂ ಲೇಖನವಿದ್ದರೂ ಅದನ್ನು ನಿಮ್ಮ ನ್ಯೂಸ್ ಫೀಡ್ ನಲ್ಲಿ ಕಾಣಿಸದಂತೆ ಮಾಡುವ ಸಾಧ್ಯತೆಯೂ ಇದೆ. ಅದೇ ಸಮಯ ನಿಮ್ಮ ಅಭಿಪ್ರಾಯವನ್ನು ಬದಲಿಸಬಲ್ಲ ಕೆಲವೊಂದು ಆಗುಹೋಗುಗಳ ವಿಚಾರಗಳು ನಿಮ್ಮ ನ್ಯೂಸ್ ಫೀಡ್ ನಲ್ಲಿ ಕಾಣಿಸದೇ ಇರಬಹುದು. ಇಂತಹ ಹಲವಾರು ಕಥೆಗಳಿದ್ದರೂ ಅಮೆರಿಕನ್ನರಲ್ಲಿ ಹೆಚ್ಚಿನವರು ಶೇ.63 ರಷ್ಟು ಮಂದಿ - ಫೇಸ್ ಬುಕ್ ನ್ಯೂಸ್ ಫೀಡ್ ಅನ್ನೇ ಅವಲಂಬಿಸಿದ್ದಾರೆಂದು ಹೇಳಲಾಗುತ್ತಿದೆ.ಪ್ರಾಯಶಃ ಇದೇ ಕಾರಣದಿಂದ ಹಲವರು ಟ್ರಂಪ್ ಅವರಿಂದ ಪ್ರಭಾವಿತರಾಗಿದ್ದಿರಬಹುದೆಂದು ಮೂಲಗಳು ತಿಳಿಸುತ್ತವೆ.
ಆದರೆ ಫೇಸ್ ಬುಕ್ ಮಾತ್ರ ಈ ಬಗ್ಗೆ ತನ್ನ ಪಾತ್ರವನ್ನು ಒಪ್ಪಲು ತಯಾರಿಲ್ಲ. ಅದೊಂದು ಮಾಧ್ಯಮ ಸಂಸ್ಥೆಯ ಥರ ಕಾರ್ಯಾಚರಿಸುತ್ತಿದೆಯೆಂಬುದನ್ನೂ ಅದು ಒಪ್ಪುತ್ತಿಲ್ಲ. ನಾವು ತಂತ್ರಜ್ಞಾನ ಕಂಪೆನಿಯೇ ಹೊರತು ಮಾಧ್ಯಮ ಸಂಸ್ಥೆಯಲ್ಲ, ಎಂದು ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್‌ಬರ್ಗ್ ಹೇಳಿದ್ದಾರೆ. ಆದರೂ ಹಲವರು ಈ ಬಗ್ಗೆ ಸ್ವಲ್ಪ ಗಂಭೀರವಾಗಿ ಯೋಚಿಸಲಾರಂಭಿಸಿದ್ದಾರೆ.







