ಟಿಪ್ಪು ಸುಲ್ತಾನ್ ಕನ್ನಡನಾಡಿನ ಹೆಮ್ಮೆಯ ವ್ಯಕ್ತಿ: ಸಚಿವೆ ಉಮಾಶ್ರೀ

ಬೆಂಗಳೂರು, ನ.10: ಟಿಪ್ಪು ಸುಲ್ತಾನ್ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಟಿಪ್ಪು ಎಲ್ಲ ಜಾತಿ,ಧರ್ಮಗಳ ನಾಯಕ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ.
ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಟಿಪ್ಪು ಜಯಂತಿ ಆಚರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ಎಲ್ಲ ಜಾತಿ, ಧರ್ಮಗಳ ನಾಯಕ. ಆತ ಕನ್ನಡ ನಾಡಿನ ಹೆಮ್ಮೆಯ ವ್ಯಕ್ತಿ. ಹೀಗಾಗಿ ರಾಜ್ಯ ಸರಕಾರವು ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುತ್ತಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭ ಮಾತನಾಡಿದ ಮುಖ್ಯಮಂತ್ರಿಗಳು, ಟಿಪ್ಪು ಸುಲ್ತಾನ್ ಮತಾಂಧನಲ್ಲ. ಟಿಪ್ಪುವಿನ ಬಗ್ಗೆ ಅಪಪ್ರಚಾರ ಮಾಡುತ್ತಿರುವವರು ನಿಜವಾದ ಮತಾಂಧರು. ಟಿಪ್ಪು ಜಾತ್ಯತೀತ ವ್ಯಕ್ತಿ. ಆತ ನಿಜವಾದ ಸ್ವಾತಂತ್ರ್ಯ ಹೋರಾಟಗಾರ. ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವವರು ಸ್ವಾರ್ಥ ರಾಜಕಾರಣಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎಂಬುದನ್ನು ಜನತೆ ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಸಚಿವರಾದ ಕೆ.ಜೆ.ಜಾರ್ಜ್ ಮತ್ತಿತರರು ಉಪಸ್ಥಿತರಿದ್ದರು.







