ಆರೆಸ್ಸೆಸ್ ನಿಂದ ಟಿಪ್ಪು ಚರಿತ್ರೆಯ ಪುಸ್ತಕ ಪ್ರಕಟ: ಪ್ರೊ.ಬಿ.ಶಿವರಾಮ ಶೆಟ್ಟಿ

ಮಂಗಳೂರು,ನ.10:ದೇಶದ ರಾಷ್ಟ್ರೀಯ ನಾಯಕರ ಚರಿತ್ರೆಯನ್ನು ದಾಖಲಿಸುವ ಸಂದರ್ಭದಲ್ಲಿ ಆರೆಸ್ಸೆಸ್ ನಿಂದ 1970ರಲ್ಲಿ ಟಿಪ್ಪುವಿನ ಚರಿತ್ರೆಯನ್ನು ದಾಖಲಿಸುವ ಪುಸ್ತಕವನ್ನು ಪ್ರಕಟಿಸಲಾಗಿದೆ ಎಂದು ಮಂಗಳೂರು ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಬಿ.ಶಿವರಾಮ ಶೆಟ್ಟಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯ ಸಂರ್ದದಲ್ಲಿ ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಟಿಪ್ಪುವಿನ ಕಾಲದಲ್ಲಿ ರಾಜಪ್ರಭುತ್ವದ ಆಳ್ವಿಕೆ ಇತ್ತು .ಆತನ ಆಡಳಿತದ ಸಂದರ್ಭದಲ್ಲಿ ಮಾಡಿದ ಜನಸೇವೆಯ ಕೆಲಸ,ಸಮುದಾಯದ ಒಳಿತಿಗಾಗಿ ಮಾಡಿದ ಒಳ್ಳೆಯ ಕೆಲಸಗಳನ್ನು ಗುರುತಿಸಿ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯ ಮೂಲಕ ಮಾಡಬೇಕು ಹೊರತು ಟಿಪ್ಪುವಿನ ಹೆಸರಿನಲ್ಲಿ ಕೆಡುಕಿನ ಕೆಲಸಗಳಿಗೆ ಮುಂದಾಗುವುದು ಸರಿಯಲ್ಲ. ರಾಜಪ್ರಭುತ್ವದ ಆಳ್ವಿಕೆಯ ಸಂದರ್ಭದಲ್ಲಿ ಹಿಂದಿನ ರಾಜರು ತಮ್ಮ ಆಡಳಿತದ ವಿಸ್ತರಣೆಗೆ ಹಾಗೂ ರಕ್ಷಣೆಗೆ ಯುದ್ಧಗಳನ್ನು ಮಾಡುತ್ತಿದ್ದರು ಅದೇ ರೀತಿ ಟಿಪ್ಪುವಿನ ಕಾಲದಲ್ಲೂ ನಡೆದಿದೆ. ಆದರೆ ಟಿಪ್ಪುವಿನ ಕಾಲದಲ್ಲಿ ಆರಂಭಗೊಂಡ ಕೈಗಾರಿಕೆಗಳು ಆಡಳಿತ ಸುಧಾರಣೆಗಳನ್ನು ಅಲ್ಲಗೆಳೆಯುವಂತಿಲ್ಲ ದೇಶದ ರಾಜರು ಬಿಟೀಷರ ಜೊತೆ ಕೈ ಜೊಡಿಸಿದಾಗಲೂ ಟಿಪ್ಪು ಬ್ರಿಟೀಷರನ್ನು ಎದುರಿಸಿರುವುದು ಚರಿತ್ರೆಯಲ್ಲಿ ದಾಖಲಾಗಿದೆ ಎಂದರು.
ಲಾವಣಿಕಾರರು ಬ್ರಿಟೀಷರಿಗೆ ಸವಾಲಾಗಿದ್ದ ಹಲಗಲಿ ಬೇಡರ ಕಥೆಯನ್ನು ಹಾಡುವಂತೆ ಟಿಪ್ಪುವಿನ ಚರಿತ್ರೆಯನ್ನು ಹಾಡುತ್ತಾರೆ.ಇಂದಿನ ಜಾಗತಿಕವಾಗಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದಾಗ ಟಿಪ್ಪುವಿನ ಹೆಸರಿನಲ್ಲಿ ಅಶಾಂತಿಯ ವಾತವರಣ ಸೃಷ್ಟಿ ಮಾಡುವ ಬದಲು ಎಲ್ಲರನ್ನು ಒಂದುಗೂಡಿಸಲು ಟಿಪ್ಪು ಜಯಂತಿ ಪ್ರೇರಣೆಯಾಗಲಿ ಎಂದು ಶಿವರಾಮ ಶೆಟ್ಟಿ ತಿಳಿಸಿದರು.







