ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿಯ ಹತ್ಯೆ

ಮೈಸೂರು, ನ.11: ಕಳೆದ ವರ್ಷ ಅ.9ರಂದು ಮೂಡುಬಿದಿರೆಯಲ್ಲಿ ನಡೆದಿದ್ದ ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾಧೀನ ಕೈದಿಯಾಗಿ ಮೈಸೂರು ಜೈಲಿನಲ್ಲಿದ್ದ ಮಂಗಳೂರು ಕಾವೂರು ಶಾಂತಿ ನಗರದ ಮುಸ್ತಫಾ ಎಂಬಾತನನ್ನು ಅದೇ ಜೈಲಿನಲ್ಲಿ ಕೈದಿಯಾಗಿದ್ದ ಮೂಡುಬಿದಿರೆ ಮೂಲದ ಬಾಂಬೆ ಕಿರಣ್ ಶೆಟ್ಟಿ ಎಂಬಾತ ಗುರುವಾರ ಬೆಳಗ್ಗೆ ಕೊಲೆಗೈದಿರುವ ಪ್ರಕರಣ ನಡೆದಿದೆ.
ಮುಸ್ತಫಾ ಮತ್ತು ಕಿರಣ್ ಶೆಟ್ಟಿ ಮೈಸೂರಿನಲ್ಲಿ ಒಂದೇ ಜೈಲಿನಲ್ಲಿದ್ದು ಇವರ ನಡುವೆ ಆಗಾಗ ತಿಕ್ಕಾಟಗಳು ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹೊಡೆದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮುಸ್ತಫಾ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂರು ವರ್ಷಗಳ ಹಿಂದೆ ಓರ್ವನ ಕಾಲು ಕಡಿದು ಮೂಡುಬಿದಿರೆಯಿಂದ ಪರಾರಿಯಾಗಿದ್ದ ಕಿರಣ್ ಶೆಟ್ಟಿಯನ್ನು ಮೂಡುಬಿದಿರೆ ಪೊಲೀಸರು ಬಾಂಬೆಯಿಂದ ಬಂಧಿಸಿದ್ದರೆನ್ನಲಾಗಿದೆ. ಆ ಬಳಿಕ ಆತನಿಗೆ ಬಾಂಬೆ ಕಿರಣ್ ಎಂಬ ಹೆಸರು ಬಂದಿತ್ತು.
ಮೂರು ತಿಂಗಳ ಹಿಂದೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ವ್ಯಕ್ತಿಯೋರ್ವರ ಕೊಲೆಗೆ ಸ್ಕೆಚ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಹಲವರನ್ನು ಬಂಧಿಸಿದ್ದರು. ಆ ಪ್ರಕರಣದಲ್ಲಿ ಕಿರಣ್ ಶೆಟ್ಟಿಯ ಪಾತ್ರವಿದೆ ಎಂಬ ಸಂಶಯದಿಂದ ಮೂಡುಬಿದಿರೆ ಪೊಲೀಸರು ಆತನನ್ನು ವಿಚಾರಣೆಗಾಗಿ ಮೈಸೂರು ಜೈಲಿನಿಂದ ಕರೆ ತಂದಿದ್ದರು. ಕಿರಣ್ ಶೆಟ್ಟಿ ಮತ್ತು ಪ್ರಶಾಂತ್ ಪೂಜಾರಿ ಆತ್ಮೀಯರಾಗಿದ್ದರು ಎಂದು ಇನ್ನೊಂದು ಮೂಲಗಳು ಹೇಳುತ್ತಿದ್ದರು, ಈ ಕೊಲೆ ಪೂರ್ವನಿಯೋಜಿತ ಎಂಬ ಆರೋಪ ಕೇಳಿ ಬರುತ್ತಿದೆ.
ಈ ಕೊಲೆಯ ಹಿಂದೆ ಪೊಲೀಸರೂ ಪರೋಕ್ಷವಾಗಿ ಶಾಮೀಲಾಗಿರಬಹುದು ಎಂಬ ಅನುಮಾನಗಳನ್ನು ಕೆಲವು ಸಂಘಟನೆಗಳು ವ್ಯಕ್ತಪಡಿಸುತ್ತಿವೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಮುಸ್ತಫಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಪ್ರಕರಣದಲ್ಲಿ ಮಾರಕಾಸ್ತ್ರಗಳನ್ನು ಆರೋಪಿ ಬಳಸಿದ್ದಾನೆ ಎಂದು ಶಂಕಿಸಲಾಗಿದೆ. ಆತನಿಗೆ ಇತರರು ಸಹಕರಿಸಿದ್ದರೆ ಎನ್ನುವ ಕುರಿತ ವಿವರಗಳು ಇನ್ನೂ ತಿಳಿದು ಬಂದಿಲ್ಲ.
ಸುದ್ದಿ ತಿಳಿದು ಸ್ಥಳಕ್ಕೆ ಡಿಸಿಪಿ ರುದ್ರಮುನಿ, ಸಿಸಿಬಿ ಪೊಲೀಸ್ ಪ್ರಕಾಶ್, ಮೇಟಗಳ್ಳಿ ಪೊಲೀಸ್ ಸುನಿಲ್ ಕುಮಾರ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಲ್ಲೆ ನಡೆಸಿದ ಕೈದಿಯ ವಿಚಾರಣೆ ಮುಂದುವರಿದಿದೆ.







