ಅಕಾಲಿದಳ, ಎಸ್ಪಿ,ಬಿಎಸ್ಪಿ ವಿರುದ್ಧ ಕೇಂದ್ರ ಸರಕಾರದ ಕರೆನ್ಸಿ ಬಾಂಬ್ !

ಹೊಸದಿಲ್ಲಿ,ನ. 10: ಮೋದಿ ಸರಕಾರದ 500,1,000ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ಕೇಂದ್ರ ಸರಕಾರದ ಕ್ರಮಕ್ಕೆ ಪಂಜಾಬ್‌ನ ಆಡಳಿತಾರೂಢ ಪಾರ್ಟಿ ಅಕಾಲಿ ದಳ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಆದ್ದರಿಂದ 500,1,000ರೂಪಾಯಿ ನೋಟುಗಳು ಹಿಂಪಡೆದಿರುವುದಕ್ಕೂ ಮುಂಬರುವ ಉತ್ತರಪ್ರದೇಶ, ಪಂಜಾಬ್ ಚುನಾವಣೆಗೂ ಯಾವ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಲು ಕೇಂದ್ರ ಹಣಕಾಸು ಸಚಿವ ಜೇಟ್ಲಿ ತೀರಾ ಕಷ್ಟ ಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಕೇಂದ್ರ ಸರಕಾರದ ನೋಟು ಬಾಂಬ್ ಅಕಾಲಿದಳ, ಸಮಾಜವಾದಿ ಪಾರ್ಟಿ, ಮತ್ತು ಬಿಎಸ್ಪಿಗಳಿಗೆ ತೀರಾ ಮಾರಕವಾಗಿ ಪರಣಿಸಿದೆ. ಆದರೆ ಬಿಜೆಪಿಯ ಮುಖದಲ್ಲಿ ಮುಗುಳ್ನಗು ಜಿನುಗಿದೆ ಎಂದು ವರದಿಯೊಂದು ತಿಳಿಸಿದೆ.
ಕೇಂದ್ರ ಸರಕಾರದ ಮೂಲಗಳು ತಿಳಿಸಿರುವ ಪ್ರಕಾರ ಈ ನಿರ್ಧಾರದಿಂದ ಕೇವಲ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಮತ್ತು ಬಿಎಸ್ಪಿ ಗಳಿಗೆ ಮಾತ್ರಹೊಡೆತವಲ್ಲ,ಪಂಜಾಬ್‌ನ ಆಡಳಿತಾರೂಢ ಅಕಾಲಿದಳ ಕೂಡಾ ಕಠಿಣ ಸ್ಥಿತಿ ಎದುರಿಸಬೇಕಾಗಿದೆ. ದೊಡ್ಡ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುದು ಪಂಜಾಬ್‌ನಲ್ಲಿ ಆಮ್ ಆದ್ಮಿ, ಕಾಂಗ್ರೆಸ್‌ಗೂ ತುಂಬ ಇಕ್ಕಟ್ಟಿನ ಪರಿಸ್ಥಿತಿಯನ್ನು ನಿರ್ಮಿಸಿದೆ. ಪಂಜಾಬ್‌ನಲ್ಲಿ ಕಳೆದ ಹತ್ತು ವರ್ಷಗಳಿಂದ ಅಕಾಲಿದಳ ಅಧಿಕಾರದಲ್ಲಿದೆ. ಅದರ ಮೇಲೆ ಶರಾಬು ದಂಧೆ ಮತ್ತು ಇತರ ವ್ಯಾಪಾರಗಳಲ್ಲಿ ಸರ್ವಾಧಿಕಾರದಿಂದ ವರ್ತಿಸುತ್ತಿದೆ ಎಂಬ ಆರೋಪವೂ ಇವೆ. ಜೊತೆಗೆ ಮಾದಕವಸ್ತುಗಳ ವ್ಯವಾಹರದಲ್ಲಿ ಭಾರೀ ಹಣ ಸಂಗ್ರಹಿಸಿದೆ ಎನ್ನಲಾಗುತ್ತಿದೆ. ಬಿಜೆಪಿಗೆ ಅಕಾಲಿದಳ ಈ ಸೂಕ್ಷ್ಮ ಪ್ರದೇಶವಾದ ಪಂಜಾಬ್‌ನಲ್ಲಿ ಗಟ್ಟಿಯಾಗಿರುವುದು ಬೇಕಿಲ್ಲ. ದುರ್ಬಲ ಅಕಾಲಿದಳವನ್ನು ಚುನಾವಣೆಯ ಬಳಿಕ ನಿಯಂತ್ರಿಸಿಡಬಹುದುಎಂದು ಅದು ಯೋಚಿಸುತ್ತಿದೆ. ಹೀಗಾಗಿ ನೋಟು ಬಾಂಬನ್ನು ಮೋದಿ ಸರಕಾರ ಸಿಡಿಸಿದೆ ಎನ್ನುವ ಮಾತು ಕೇಳಿ ಬಂದಿವೆ ಎಂದು ವರದಿ ತಿಳಿಸಿದೆ.







