ರಾಜ್ಯಕ್ಕೆ ಟಿಪ್ಪುಸುಲ್ತಾನ್ ಕೊಡುಗೆ ಅಪಾರ: ಶಾಸಕ ನಾರಾಯಣ ಗೌಡ
ಮಂಡ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿ

ಕೃಷ್ಣರಾಜಪೇಟೆ, ನ.10: ಸ್ವಾಭಿಮಾನವನ್ನು ಬದಿಗೊತ್ತಿ ಬ್ರಿಟಿಷರೊಂದಿಗೆ ರಾಜಿ ಸಂಧಾನ ಮಾಡಿಕೊಳ್ಳದೇ ತನ್ನ ಸ್ವಂತ ಮಕ್ಕಳನ್ನೇ ಒತ್ತೆಯಿಟ್ಟು ರಾಜ್ಯದ ಉಳಿವಿಗಾಗಿ ಹೋರಾಟ ನಡೆಸುತ್ತಲೇ ವೀರಮರಣವನ್ನಪ್ಪಿದ ಮೈಸೂರುಹುಲಿ ಹಜರತ್ ಟಿಪ್ಪುಸುಲ್ತಾನ್ ದೇಶದಲ್ಲಿ ಪ್ರಪ್ರಥಮ ಬಾರಿಗೆ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಸ್ವಾತಂತ್ರ್ಯ ಸೇನಾನಿ. ಇಂತಹ ಮಹಾನ್ ನಾಯಕರ ಜಯಂತಿ ಮಹೋತ್ಸವವನ್ನು ರಾಜಕೀಯ ಬದಿಗಿಟ್ಟು ಪಕ್ಷಾತೀತವಾಗಿ ಆಚರಿಸಬೇಕು ಎಂದು ಮುಂಬೈನ ಉದ್ಯಮಿ, ಕೆ.ಆರ್.ಪೇಟೆ ಶಾಸಕ ಡಾ.ನಾರಾಯಣ ಆರ್. ಗೌಡ ಕರೆ ನೀಡಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತವು ಆಯೋಜಿಸಿದ್ದ ಸ್ವಾತಂತ್ರ್ಯ ಸೇನಾನಿ, ದಕ್ಷ ಆಡಳಿತಗಾರ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಲ್ಕು ಮೈಸೂರು ಮಹಾ ಯುದ್ಧಗಳಲ್ಲಿಯೂ ನಿರ್ಣಾಯಕ ಪಾತ್ರವನ್ನು ವಹಿಸಿದ್ದ ದಕ್ಷ ಆಡಳಿತಗಾರ ಟಿಪ್ಪುಸುಲ್ತಾನರ ಕೊಡುಗೆ ರಾಜ್ಯಕ್ಕೆ ಅಪಾರವಾಗಿದೆ. ಮುಸ್ಲಿಂ ರಾಜನಾಗಿದ್ದರೂ ಎಲ್ಲಾ ಧರ್ಮಗಳನ್ನು ಪ್ರೀತಿಸುತ್ತಿದ್ದ, ಪ್ರಜೆಗಳನ್ನು ತನ್ನ ಮಕ್ಕಳಂತೆ ಕಾಣುತ್ತಿದ್ದ ಸರ್ವಧರ್ಮ ಸಹಿಷ್ಣು ರಾಜನಾದ ಟಿಪ್ಪುಸುಲ್ತಾನ್ ಶ್ರೀರಂಗಪಟ್ಟಣದ ಆರಾಧ್ಯ ದೈವ ಶ್ರೀರಂಗನಾಥನ ನೆಚ್ಚಿನ ಭಕ್ತನಾಗಿದ್ದುದು ಮಾತ್ರವಲ್ಲದೇ ಅರಸೀಕರೆ ಬಳಿಯ ಕೋಡಿಮಠ, ತಾಲೂಕಿನ ಕಾಪನಹಳ್ಳಿಯ ಗವೀಮಠ, ನಂಜನಗೂಡಿನ ನಂಜುಂಡೇಶ್ವರ ದೇವಾಲಯ, ಕೊಲ್ಲೂರಿನ ಮೂಕಾಂಬಿಕ ಹಾಗೂ ಶೃಂಗೇರಿಯ ಶಾರದಾಂಬೆ ದೇವಾಲಯಗಳಿಗೆ ನೂರಾರು ಎಕರೆ ಭೂಮಿಯನ್ನು ಜಹಗೀರಾಗಿ ಕೊಡುಗೆ ನೀಡಿದ್ದು ಮಾತ್ರವಲ್ಲದೇ ನಿಯಮಿತವಾಗಿ ದೇವಾಲಯಗಳಿಗೆ ಭೇಟಿನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಎಂದು ಇತಿಹಾಸದ ಪುಟಗಳು ತಮ್ಮಲ್ಲಿನ ಸತ್ಯವನ್ನು ಸಾರಿ ಹೇಳುತ್ತಿವೆ. ಇಂದಿಗೂ ನಂಜನಗೂಡು, ಶೃಂಗೇರಿ ಮತ್ತು ಕೊಲ್ಲೂರಿನಲ್ಲಿ ನಡೆಯುತ್ತಿರುವ ಸಲಾಂ ಆರತಿಯ ವಿಶೇಷ ಪೂಜೆಗಳು ಟಿಪ್ಪು ಸುಲ್ತಾನ್ ಹಿಂದೂ ದೇವಾಲಯಗಳ ಮೇಲಿಟ್ಟಿದ್ದ ಪ್ರೀತಿ ಮತ್ತು ಅಭಿಮಾನವನ್ನು ತೋರಿಸುತ್ತದೆ ಎಂದರು. ಟಿಪ್ಪು ಜಯಂತಿಯನ್ನು ರಾಜಕೀಯ ಪಕ್ಷಗಳು ಕೇವಲ ರಾಜಕಾರಣಕ್ಕಾಗಿ ವಿರೋಧಿಸುತ್ತಿವೆ. ಟಿಪ್ಪು ಜಯಂತಿಯನ್ನು ಆಚರಿಸಬೇಕೆಂಬ ಸರಕಾರದ ಬದ್ಧತೆಯನ್ನು ತಾವು ಅಭಿನಂದಿಸುವುದಾಗಿ ನಾರಾಯಣಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಕಿಕ್ಕೇರಿ ಕೆ.ಎಂ ಗಂಗಾಧರ್ ಮಾತನಾಡಿ, ಟಿಪ್ಪು ಸುಲ್ತಾನ್ ಅಪ್ರತಿಮ ದೇಶಭಕ್ತ ಮಾತ್ರವಲ್ಲದೇ ಸ್ವಾತಂತ್ರ್ಯ ಹೋರಾಟಗಾರನಗಿದ್ದ. ಟಿಪ್ಪುವಿನಂತೆ ಜೀವನದಲ್ಲಿ ಎದುರಾಗುವ ಸಂಕಷ್ಟಗಳು ಹಾಗೂ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಗುರಿಮುಟ್ಟುವ ಆತ್ಮವಿಶ್ವಾಸವನ್ನು ಗಳಿಸಿಕೊಂಡು ಅಭಿವೃದ್ಧಿಯ ಪಥದತ್ತ ಸಾಗಬೇಕು. ಟಿಪ್ಪುವಿನ ಇತಿಹಾಸವನ್ನು ತಿಳಿಯದವರು ಮಾತ್ರ ಟಿಪ್ಪು ಸುಲ್ತಾನನನ್ನು ವಿರೋಧಿಸುತ್ತಾರೆ. ಟಿಪ್ಪು ನಿಜವಾದ ಹೋರಾಟಗಾರ. ಜೀವನದಲ್ಲಿ ಎಷ್ಟೇ ಕಷ್ಟ ನಷ್ಟಗಳು ಎದುರಾದರೂ ಹೇಡಿಯಂತೆ ರಾಜಿ ಮಾಡಿಕೊಳ್ಳದೇ ರಣರಂಗದಲ್ಲಿ ಹೋರಾಡಿ, ಮಡಿದು ಸ್ವಾತಂತ್ರ್ಯ ಸೇನಾನಿಯಾಗಿದ್ದಾನೆ ಎಂದು ವಿವರಿಸಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷೆ ಕೆ.ರತ್ನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ ಟಿಪ್ಪು ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಎಲ್.ದೇವರಾಜು, ಎಚ್.ಟಿ ಮಂಜು, ರಾಮದಾಸ್, ತಾ.ಪಂ ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷ ಜಾನಕೀರಾಂ, ಸದಸ್ಯರಾದ ಮಾಧವಪ್ರಸಾದ್, ರಾಜಾಹುಲಿ ದಿನೇಶ್, ಡಿ.ಪ್ರೇಮಕುಮಾರ್, ತಾಲೂಕು ಕಾಂಗ್ರೇಸ್ ಅಧ್ಯಕ್ಷ ಎಂ.ಡಿ ಕೃಷ್ಣಮೂರ್ತಿ, ಬಸ್ತಿರಂಗಪ್ಪ, ಮುಸ್ಲಿಂ ಸಮಾಜದ ಹಿರಿಯ ಮುಖಂಡ ಕೆ.ಯೂನಸ್ ಖಾನ್, ಪುರಸಭೆಯ ಮಾಜಿಅಧ್ಯಕ್ಷ ಕೆ.ಗೌಸ್‌ಖಾನ್, ನವೀದ್ ಅಹ್ಮದ್, ಅಸ್ಮತುಲ್ಲಾ ಶರೀಫ್, ಎಂ.ಕೆ. ಖಲೀಲ್, ಚಾಂದ್‌ಪಾಶ, ಜಮೀರ್ ಅಹ್ಮದ್, ಆಶ್ರಫ್ ಪಾಶ, ಆರೀಫ್ ಪಾಶ, ಸೈಯ್ಯದ್ ಆಬೀದ್, ದಡದಹಳ್ಳಿ ಅತೀಕ್, ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶಯ್ಯ, ಸಬ್‌ಇನ್ಸ್‌ಪೆಕ್ಟರ್ ಅರುಣ್‌ಕುಮಾರ್, ತಾಲೂಕು ಸಮಾಜಕಲ್ಯಾಣಾಧಿಕಾರಿ ಸುಧಾಮಣಿ, ಬಿಸಿಎಂ ಕಲ್ಯಾಣಾಧಿಕಾರಿ ಈರಪ್ಪಗೌಡ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಚಿಕ್ಕಾಡೆ ಅರವಿಂದ್, ಕ್ಷೇತ್ರ ಶಿಕ್ಷಣಾಧಿಕಾರಿ ಜವರೇಗೌಡ ಮತ್ತಿತರರು ಭಾಗವಹಿಸಿದ್ದರು.
ಗಮನಸೆಳೆದ ಟಿಪ್ಪು ಸುಲ್ತಾನ್!
ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟಿಪ್ಪು ವೇಷಧಾರಿ ಬಾಲಕ ನವೋದಯ ಮಾದರಿಯ ಅಲ್ಪಸಂಖ್ಯಾತರ ವಸತಿಶಾಲೆಯ ವಿದ್ಯಾರ್ಥಿ ಸೈಯದ್ ಶೋಯೆಬ್ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಗಮನ ಸೆಳೆದನು.
ರಾಜಶ್ವನಿರೀಕ್ಷಕ ಮರಿಸಿದ್ಧೇಗೌಡ ಸ್ವಾಗತಿಸಿದರು. ಉಪತಹಶೀಲ್ದಾರ್ ಮಹದೇವೇಗೌಡ ವಂದಿಸಿದರು. ಲಕ್ಷ್ಮೀಕಾಂತ್ ಕಾರ್ಯಕ್ರಮ ನಿರೂಪಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.







